Monday, July 20, 2015

New Fortnightly Column in Kannada Prabha

So this has happened. I got talked into writing a column in Kannada for Kannada Prabha, a daily. A column in that newspaper - the many, many ironies associated with it aren't lost on me. I am not a Kannada writer, Kannada is, when it comes to writing, a language as distant to me as any other. I am way out of my comfort zone here, hence it is challenging, and so, welcome. Yet. It feels nice to be asked to write something like this.

I will write every alternate Sunday, broadly on books, cinema, nostalgia (I suppose), navigating cosmopolitanism as a woman, this and that. Do read, it will run under the name 'Binkana'. This one is about old cinema halls, best friends and the blockbuster movie Bahubali.

A slightly unedited version below. 

ಚಿತ್ರಮಂದಿರದ ಕಾಡುವ ಚಿತ್ರಗಳು 

"ಯೇಮ್ಮಂಡಿ" ಎನ್ನೋ ಒಂದು ಶಬ್ದ ಬಿಟ್ಟರೆ ತೆಲುಗು ಭಾಷೆ ನನಗೆ ಬರುವುದಿಲ್ಲ. ಕನ್ನಡ ಲಿಪಿಯ ಹಾಗೆಯೇ ಇರುವುದರಿಂದ ಆಗಾಗೆ ಫಿಲಂ ಪೋಸ್ಟರ್ ಗಳನ್ನು ರೆಡ್ ಟ್ರಾಫಿಕ್ ಲೈಟಿನಲ್ಲಿ ಕಣ್ಣಿಗೆ ಬಿದ್ದರೆ ಓದುತ್ತೇನೆ ಅಷ್ಟೆ. ಅದೇನೋ ಭರ್ಜರಿ ಕರ್ಚು ಮಾಡಿ ತೆಗೆದ ಸಿನೆಮಾ ಅಂತೆ, ಹಿಂದೆಂದೂ ಭಾರತದ ಸಿನೆಮಾ ರಂಗದಲ್ಲಿ ಕಾಣದ ಕಂಪ್ಯೂಟರ್ ಗ್ರಾಫಿಕ್ಸ್ ಅಂತೆ, ಅದ್ಭುತ ಅಂತೆ, ಅಂತೆಲ್ಲಾ ಪತ್ರಿಕೆ, ಇಂಟರ್ನೆಟ್ ನಲ್ಲಿ ನೋಡಿ, ಸರಿ ಏನೋ ಇರ್ಲಿ ಅಂತ ಹೇಳಿ ನಿನ್ನೆ ಅಲ್ಲ ಮೊನ್ನೆ 'ಬಾಹುಬಲಿ' ಚಿತ್ರಕ್ಕೆ ಹೋಗಿದ್ದೆವು. ಸಬ್ ಟೈಟಲ್ ಇರಬಹುದು ಎಂದುಕೊಂಡು. ನಾವು ಹೋದಲ್ಲಿ ಇರಲಿಲ್ಲ. ಧಾರಾಕಾರ ಮಳೆ ಇನ್ನೇನು ಶುರುವಾಗಬೇಕು ಎಂದಿರುವ ಕೆಲ ದಿನಗಳ ಹಿಂದೆ ಅದೊಂದು ಜುಮ್ ಅನ್ನೋ ಚಳಿ ಇದೆಯಲ್ಲ? ಲೇಟ್ ನೈಟ್ ಶೋಗೆ ಹೋಗುತ್ತಿರುವಾಗ ಇನ್ನು ಸ್ವಲ್ಪ ದಪ್ಪದ ಜ್ಯಾಕೆಟ್ ಹಾಕಬೇಕ್ಕಿತ್ತೇನೋ ಎಂದು ಒಂದು ಕ್ಷಣಕ್ಕೆ ಅನಿಸುತ್ತಿರಬೇಕಾದರೆ ಅದ್ಯಾವುದೋ ಕ್ವಾರ್ಟರ್ಸ್ ಗಳ ಸಾಲಿನ ಮುಂದೆ ಸಾಲಾಗಿ ಮೇ ಫ್ಲವರ್ ಮರಗಳನ್ನು ತೋರಿಸಿ ದಿ ಬೆಸ್ಟ್ ಫ್ರೆಂಡ್ ಹೂವರಲಿದಾಗ ಸಾಲಿಗೆ ಬೆಂಕಿ ಹಾಕಿದ ಹಾಗೆ ಕಾಣುತ್ತದೆ ಅಂತೆ ಹೇಳುತ್ತಿರುವುದು ಕಿವಿಗೆ ಬಿತ್ತು. ಇನ್ನೊಂದಷ್ಟು ದೂರದಲ್ಲೇ ಥೀಯೇಟರ್ ಬಂದೇಬಿಟ್ಟಿತು.


ಬಾಹುಬಲಿ ಸಿನಿಮಾದ ಬಗ್ಗೆ ಹೊಸದಾಗಿ ಯೇನನ್ನಲಿ? ಮಾಡಿದ ಭರ್ಜರಿ ಕರ್ಚು ಪ್ರತಿಯೊಂದು ಸೀನಿನಲ್ಲೂ ಕಾಣುತ್ತದೆ. ಸಾಮಾನ್ಯವಾದ ಗ್ರಾಫಿಕ್ಸ್ ಬಳಸಿದ ಇಂಡಿಯನ್ ಸಿನೆಮಾಗಳಿಂದ ಅದೆಷ್ಟೋ ಚೆನ್ನಾಗಿ ತೆಗೆದ ಸಿನೆಮಾ. ಕಮರ್ಷಿಯಲ್ ಸಿನೆಮಾ. ಅವುಗಳ್ಳನ್ನು ಹೆಚ್ಚು ನೋಡದ ನನಗೆ ಅಷ್ಟೊಂದು ಇಂಪ್ರೆಸ್ಸ್ ಆಗದಿದ್ದರು, ಅಷ್ಟೇನು ಖರಾಬಾಗಿಲ್ಲ ಅಂತೆನಿಸಿತು. ಒಳ್ಳೆ ಅದ್ಯಾವುದೋ ಸೀರಿಯಲ್ ಥರ ಇನ್ನೊಂದು ವರ್ಷ ಬಿಟ್ಟು ಇನ್ನೊಂದು ಕಂತು ಹೋಗಿ ನೋದಬೇಕಾಗುವ ಹಾಗೆ ಸಿನೆಮಾ ತೆಗೆಯುವ ಟ್ರೆಂಡ್ ಇದರಿಂದ ಶುರುವಾಗದ್ದಿದ್ದರೆ ಸಾಕಷ್ಟೇ. ನಿಜ ಹೇಳಬೇಕಾದರೆ ನನಗೆ ಇಂಪ್ರೆಸ್ಸ್ ಆದದ್ದು ಆ ಥೀಯೇಟರ್ ನೋಡಿ. ಸಿಂಗಲ್ ಸ್ಕ್ರೀನ್, ಬಂಡವಾಳಶಾಹಿತ್ವದ ಪ್ರತ್ಯಕ್ಷ ರೂಪವಾಗಿರುವ ಯಾವುದೇ ಮಾಲಿನ ಮೂರನೇ ಮಹಡಿಯಲ್ಲಿ ಇರದೇ, ಸಿಟಿಯ ಕೊಂಚ ಹೊರವಲೆಯದಲ್ಲಿರುವ ನನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಅದೇ, ಮೇಲೆ ಹೇಳಿದ ಬುಗ್ ಎಂದು ಬೆಂಕಿ ಹಾಕಿದಂತೆ ಕಾಣುವ ಮೇ ಫ್ಲವರ್ ಮರಗಳ ಹತ್ತಿರದ ಒಂದು ಥೀಯೇಟರ್. ಇನ್ನೇನು ಮುರಿದೇ ಹೋಯಿತು ಎಂಬುವಂತಹ ಸೀಟುಗಳು, ಎಷ್ಟೋ ವರ್ಷಗಳಿಂದ ಸೇರುತ್ತಾ ಬಂದ ಅದೆಂತ್ತದ್ದೋ ವಾಸನೆ. ಅದರದ್ದೇ ಆದ 'ಕ್ಯಾರೆಕ್ಟರ್'. ಪ್ರತಿಯೊಂದು ಶೋವಿನ ಮೊದಲು ಫಿನೈಲ್ ಹಾಕಿ ತೊಳೆದ ಫಳ ಫಳ ಎನ್ನುವ ಶೋಕಿಯಲ್ಲ ನೋಡಿ.

ಚೀಪ್ ಕಾಗದದ ಮೇಲೆ ಅರ್ಜೆಂಟಿನಲ್ಲಿ ಚಾಪಿಸಿದ ಟಿಕೆಟ್ ಹಿಡಿದು ಮುಖ್ಯ ಬಾಗಿಲಿನ ಒಳ ಹೋದಷ್ಟರಲ್ಲಿ ಕಣ್ಣಿಗೆ ಬಿದ್ದ ಉದ್ದ ತಿಂಡಿ, ಪಾಪ್ ಕಾರ್ನ್, ಪೆಪ್ಸಿ ಕೌಂಟರ್ ನೋಡಿದಾಕ್ಷಣ ನೆನಪಾದುದ್ದು ನನ್ನೂರು. ಮಡಿಕೇರಿ. ಆ ಕಾಲದಲ್ಲಿ ಇದ್ದುದು ಎರಡು ಥೀಯೇಟರುಗಳು, ಕಾವೇರಿ ಥೀಯೇಟರ್, ಬಸಪ್ಪ ಥೀಯೇಟರ್. ಕಾವೇರಿ ಕಟ್ಟುತ್ತಿರುವಾಗ ಕಟ್ಟಡದ ಮಾಲೀಕರು ಊರವರಿಗೆಂದು ಒಂದು ಸ್ಪರ್ದೆ ಇಟ್ಟಿದ್ದರಂತೆ, ಥಿಯೇಟರಿಗೆ ಹೆಸರಿಡಲು. ಕೊಡಗಿನಲ್ಲಿ ಸೃಜನಾತ್ಮಕವಾಗಿ 'ಕಾವೇರಿ' ಹೆಸರನ್ನು ಆಯ್ಕೆ ಮಾಡಿದ ಮಾಲೀಕರಿಗೆ ಅದೇನು ಸ್ಪರ್ದೆಯಿಡುವ ಅನಿವಾರ್ಯ ಕಂಡಿತೋ ಏನೋ.

ಎರಡರಲ್ಲಿ ಒಂದರಲ್ಲಿ ಮಾರ್ನಿಂಗ್ ಶೋವಿನಲ್ಲಿ ಇಂಗ್ಲಿಷ್ ಸಿನಿಮಾ, ಹೆಚ್ಚಾಗಿ ಹೆಸರೇ ಕೇಳದ್ದು, ನಡಿಸಿದರೆ, ಎರಡರಲ್ಲೂ ಮ್ಯಾತ್ನೀ, ಫಸ್ಟ್ ಮತ್ತು ಸೆಕೆಂಡ್ ಶೋ ಕನ್ನಡವೋ, ಅಪರೂಪಕ್ಕೆ ಹಿಂದಿಯೋ, ಹೆಚ್ಚಾಗಿ ತಮಿಳು ಸಿನಿಮಾ ನಡೆಯುತ್ತಿತ್ತು. ಒಳಗೆಯೇ ಸಿಗರೇಟು, ಬೀಡಿ ಸೇದುತ್ತಿದವರಿಗೆ ಅಮ್ಮ ಅವರಿಗೆ ಬೈದು ಸೀಟಿನ ಕೆಳಗೆ ಆರಿಸಿ ಬಿಸಾಡುವಂತೆ ಮಾಡುತ್ತಿದಳು. ಎಡ, ಬಲದ ಎರಡು ಗೋಡೆಗಳಲ್ಲಿ ತರ ತರ ಬಣ್ಣದ, ಸೈಜಿನ ಬಬ್ಬಲ್ ಗಂ ಅಂಟಿಸಿರುತ್ತಿದ್ದವು. ಹೌಸ್ ಫುಲ್ ಆದರು ನಮ್ಮದೊಂದು ಹಾಜರಾತಿ ಇರಲಿ ಎನ್ನುವ ಒಂದೆರಡು ಹೆಗ್ಗಣಗಳು. ಊರಿನ ಬಟ್ಟೆ ಅಂಗಡಿ, ಅದು ಇದು ಜಾಹಿರಾತುಗಳ ಸ್ಲೈಡ್ ಗಳು ಹಾಕುತ್ತಿರಬೇಕಾದರೆ ಶುರುವಾಗುತ್ತಿದ್ದುದು 'ಕೊಡಗಿನ ಕಾವೇರಿ...ಕಾವೇರಿ... ನೀ...ಬೆಡಗಿನ ವಯ್ಯಾರಿ', ಶರಪಂಜರ ಚಿತ್ರದ ಹಾಡು. ಥಿಯೇಟರಿನ ಹೊರಗೆ ಊರವರ ಜೊತೆ ಹರಟೆ ಹೊಡೆಯುತ್ತಿದವರು 'ಪಿಕ್ಚರ್ ಶುರುವಾಯಿತು' ಎಂದು ರಬಸದಲ್ಲಿ ಒಳ ಬಂದು ತಮ್ಮತಮ್ಮ ಸೀಟು ಹಿಡಿಯಲು ಅದೇ ಸೂಚನೆ. ಎರಡು ಕಡೆ ಹಾಕುತ್ತಿದ ವರ್ಶನಿನಲ್ಲಿ ಮಧ್ಯದಲ್ಲೆಲ್ಲೋ ಟೇಪ್ ಹಳೆಯದಾಗಿ, ಸವೆದ ಕರ ಕರ ಶಬ್ದವಿರುತ್ತಿತ್ತು. ಮೊನ್ನೆ ಬಾಹುಬಲಿ ಶುರುವಾಗುವ ಮುಂಚೆ ಇದನ್ನೆಲ್ಲಾ ದಿ ಬೆಸ್ಟ್ ಫ್ರೆಂಡ್ ಹತ್ತರೆ ಹೇಳುತ್ತಿರಬೇಕಾದರೆ, ನೆನಪಾಗಿ, ಮನೆಗೆ ಬಂದು ಅದೇ ಹಾಡನ್ನು ಡೌನ್ಲೋಡ್ ಮಾಡಿದಾಗ ಅದ್ಹೇಗೋ ಗೊತ್ತಿಲ್ಲ, ಸಿಕ್ಕಿದ್ದು ಕಾವೇರಿ ಬಸಪ್ಪ ಥಿಯೇಟರಿನ ಕರ ಕರ ವರ್ಶನ್.

ಬೆಂಗಳೂರಿನ ನಾವು ಹೋದ ಸಿಂಗಲ್ ಸ್ಕ್ರೀನ್ ಥಿಯೇಟರಿನ ಒಳ ಇದ್ದ ಉದ್ದನೆಯ ತಿಂಡಿ ಕೌಂಟರಿನ ಹಾಗೆಯೇ ಕಾವೇರಿಯಲ್ಲೂ ಒಂದಿತ್ತು. ಒಬ್ಬ ವಯಸ್ಸು ಸರಿಯಾಗಿ ಅದೆಷ್ಟಿರಬಹುದು ಎಂದು ಊಹಿಸಲಾಗದಿರುವ ಮುದುಕ. ಅಪ್ಪನ ಕೈಯಿಂದ ಇಳಿದು, ಬೆರಳು ಹಿಡಿಯುತ್ತ ದೊಡ್ಡವಳಾಗಿ ಫ್ರೆಂಡ್ಸ್ ಒಟ್ಟಿಗೆ ಹೋಗಲು ಶುರುಮಾಡಿ, ಮಹಾನಗರ ಸೇರಿ ಮತ್ತಷ್ಟು ವರ್ಷಗಳು ಕಳೆದು ಅಂದೊಮ್ಮೆ ಹಿಂತಿರುಗಿ ಹೋಗಿ ನೋಡಿದರೂ ಆ ಮುದುಕನ ಮುಖ ಒಂದಿಷ್ಟು ಬದಲಾಗಿರಲಿಲ್ಲ. ಗೋಲ್ಡ್ ಸ್ಪಾಟ್, ಹಸಿರು ಕಡಲೆ, ಕಡಲೆ ಮಿಟಾಯಿ, ಹುಳಿ ಪೆಪ್ಪಿ, ನಂತರ ಪಾಪ್ ಕಾರ್ನ್, ಡೈರಿ ಮಿಲ್ಕ್ ಖರೀದಿಸಿದ ಕೌಂಟರ್ ಅದು.

ಕಳೆದ ಬಾರಿ ಹೋದಾಗ ಬಸಪ್ಪ ಥೀಯೇಟರ್ ಒಡೆದ್ದಿದ್ದರು, ಕಾವೇರಿಯಲ್ಲಿ ಡಾಲ್ಬಿ ಸೌಂಡ್ ಸಿಸ್ಟಮ್ ಬಂದಿತ್ತು. ಹರೆದು ಹೋದ ಟೇಪಿನಿಂದ ಕೊಡಗಿನ ಕಾವೇರಿ ಇರಲಿಲ್ಲ. ಆ ಮುದುಕ ಆ ಡಿಂ ಬೆಳಕು ಹಾಕಿರುವ ಕೌಂಟರಿನ ಹಿಂದೆ ಕಾಲುಗಳನ್ನು ಎಳೆಯುತ್ತಾ ನಿದ್ಧಾನವಾಗಿ ಅಚೆಂದೀಚೆ ನಡೆಯುತ್ತಿದ್ದ. ಒಂದೊಂದರಿ ಎಲ್ಲಾ ಬದಲಾದರು ಏನೋ ಒಂದು ಬದಲಾಗುವುದಿಲ್ಲ. ಆ ಬದಲಾಗದಿರುವುದರಲ್ಲಿ ಎಂದೋ ಬಿಟ್ಟು ಬಂದ ಊರಿನ ಒಂದು ಸ್ತಿರತೆ. ನಾವೆಂದೂ ಹಿಂತಿರುಗಿ ಮನೆಗೆ ಹೋಗಲು ಸಾದ್ಯವಿಲ್ಲ ಎಂದೆನ್ನುತ್ತಾರೆ, ಬುದ್ದಿಜೀವಿಗಳು. ನಿಜ. ಆದರೆ ಎಲ್ಲಿದ್ದರು ಅಲಲ್ಲಿ ಬದಲಾದ, ಬದಲಾಗದ ಊರಿನ, ಮನೆಯ ಚಿನ್ನೆಗಳು ಕಾಣುತ್ತಿರುತ್ತವೆ.
ಸಾಂಕೇತಿಕತ್ವ. 'ಸಿನೆಮಾ ಪ್ಯಾರಡಿಸೊ' ಅಂತಹ ಅದ್ಭುತ ಚಿತ್ರಗಳನ್ನು ನೋಡುವಾಗ. ಹರಿದ ಹಾಡುಗಳನ್ನು ಕೇಳುವಾಗ. ಅದೆಲ್ಲೋ, ಹೇಗೋ...

ಹಿಂತಿರುಗಿ ಹೋದಾಗ ಕಾವೇರಿಯಲ್ಲಿ ಪಾಪ್ ಕಾರ್ನ್ ಕೊಳ್ಳಲಿಲ್ಲ, ಮೊನ್ನೆ ಬಾಹುಬಲಿ ಚಿತ್ರಕ್ಕೂ ಖರೀದಿಸಲಿಲ್ಲ. ಅದರ ಅಗತ್ಯವಿಲ್ಲ ಎಂದೆನಿಸಿತ್ತು.

No comments: