Thursday, September 24, 2015

Mapilla Ramayana, Freedom of Speech, etc: Kannada Prabha Column

In the aftermath of Dr M M Kalburgi's murder, threats to Dr M M Basheer and the dozens of unreported attacks on freedom of speech, I wrote about these, and Mapilla Ramayana and other things in Binkana, my Kannada Prabha column this week.

ವಾಕ್ ಸಂಪ್ರದಾಯದ ಸತ್ಯ 
ನಮ್ಮ ನಡುವಿನ ಮಿಥ್ಯೆ 


ಹಿತ್ಲು ಮನೆಯ ಕಥೆಯಿದು. ಕರ್ಕ್ಕಟಕಂ ಮಾಸ ಕೆಲ ದಿನಗಳ ಹಿಂದೆ ಮುಗಿದು ಈಗ ಚಿಂಗಂ ಮಾಸ ನಡೆಯುತ್ತಿದೆ, ಕೇರಳದಲ್ಲಿ. ನಮ್ಮೊರ ಕಡೆ ಕರ್ಕ್ಕಟಕಂ ಅನ್ನು ಕಕ್ಕಡ ಮಾಸ ಎಂದು ಕರೆಯುತ್ತಾರೆ. ಧೋ ಎಂದು ಮಳೆ ಸುರಿಯುವ ಆಟಿ ಮಾಸ. ಕಕ್ಕಡದಲ್ಲಿ ಆಟಿ ಸೊಪ್ಪಿನ ಪಾಯಸ - ನೇರಳೆ ಬಣ್ಣದ್ದು - ಮಾಡುವ ಸಂಪ್ರದಾಯ, ಇದು ನಾಲಿಗೆಯನ್ನು ಸ್ವಚ್ಚ ಮಾಡುತ್ತದೆ ಎಂಬ ನಂಬಿಕೆಯಿದೆ. ಕೇರಳದ ಸಾಂಸ್ಕೃತಿಕ, ಬೌಧಿಕ ವಲಯದಲ್ಲಿ ಕರ್ಕ್ಕಟಕಂ ಮಾಸವನ್ನು ರಾಮಾಯಣ ಮಾಸವೆಂದೂ ಸಹ ಕರೆಯುತ್ತಾರೆ. ಈ ರಾಮಾಯಣ ಮಾಸದಲ್ಲಿ ಮೊನ್ನೆ ಒಂದು ವಿಷಯ ನಡೆಯಿತು.

ಈ ಒಂದು ತಿಂಗಳಿನ ಕಾಲ ಪತ್ರಿಕೆಗಳು, ಮ್ಯಾಗಜಿನ್ ಗಳು ಲೇಖಕರಿಂದ, ವಿದ್ವಾಂಸರಿಂದ ರಾಮಾಯಣದ ಬಗ್ಗೆ ಅಂಕಣಗಳನ್ನು ಬರೆಸುವ ವಾಡಿಕೆ ಇದೆ. ಕೇರಳದ ದಿನಪತ್ರಿಕೆಯೊಂದು ಎಂ ಎಂ ಬಷೀರ್ ಅವರನ್ನು ವಾಲ್ಮೀಕಿ ರಾಮಾಯಣದ ಬಗ್ಗೆ ಆರು ಲೇಖನಗಳನ್ನು ಬರೆಯಲು ಆಹ್ವಾನಿಸಿತು. ಕಳೆದ ವರ್ಷವೂ ಇವರು ಇಂತಹಾ ಲೇಖನಗಳನ್ನು ಬರೆದಿದ್ದರು. ಎಪ್ಪತೈದು ವರ್ಷದ ಬಷೀರ್ ಅವರು ಪ್ರಸಿದ್ಧ ವಿಮರ್ಶಕರು, ಅಧ್ಯಾಪಕರು, ಮತ್ತು ಮಲಯಾಳಂ ನವ್ಯ ಸಾಹಿತಿಗಳ ಸಾಲಿನಲ್ಲಿ ದಿಗ್ಗಜರು. ಕುರಾನ್ ಬಗ್ಗೆಯೂ ಸಹ ವಿಮರ್ಶಿಸಿದ್ದಾರೆ ಎನ್ನುವ ಅಗತ್ಯ ಇಲ್ಲಿದೆ.

ಮೊನೆ ಕಳೆದ ರಾಮಾಯಣ ಮಾಸದಲ್ಲಿ ಅವರ ಐದು ಲೇಖನಗಳು ಹೊರಬಂದವು. ಆರನೇಯದನ್ನು ಬರೆಯುವುದಿಲ್ಲ ಎಂದು ಹೇಳಿ ನಿಲ್ಲಿಸಿದರು. ಕಾರಣ, ಕೇರಳದಲ್ಲಿ ಹೆಚ್ಚಾಗಿ ಯಾರೂ ಹೆಸರು ಕೇಳದ, ಕೇವಲ ೫೦-೬೦ ಮಂದಿ ಸದಸ್ಯರಿರುವ ಸೇನೆಯೊಂದು ಅವರಿಗೆ ಬೆದರಿಕೆ ಕರೆಗಳನ್ನು ಮಾಡಿ ಕಿರುಕುಳ ಕೊಟ್ಟಿತ್ತು. ಒಬ್ಬ ಹಾಜಿ, ಒಬ್ಬ ಮುಸ್ಲಿಂಗೆ ರಾಮಾಯಣದ ಬಗ್ಗೆ, ರಾಮನ ಬಗ್ಗೆ ಬರೆಯುವ ಹಕ್ಕೇನಿದೆ ಎಂಬುದು ಈ ಸೇನೆಯ ವಾದ. ಬಷೀರ್ ಅವರು ತಮ್ಮ ಲೇಖನಗಳಲ್ಲಿ ವಾಲ್ಮೀಕಿಯ ಶಬ್ಧಗಳನ್ನು ಉದ್ಧರಣಾ ಚಿನ್ನೆಗಳ ಒಳಗಿಟ್ಟೇ ಉಲ್ಲೇಖಿಸಿದರು ಎಂಬುದನ್ನು ಸೇನೆಯ ಸಿಪಾಹಿಗಳು ಅಲಕ್ಷಿಸಿದ್ದರು. ಈ ವಯಸ್ಸಿನಲ್ಲಿ ತನ್ನ ಇಡೀ ವಿದ್ವತನ್ನು ಕೇವಲ ತನ್ನ ಜಾತಿಗೆ ಕುಗ್ಗಿಸಿದ್ದನ್ನು ತಡೆಯಲಾಗುವುದಿಲ್ಲ ಎಂದು ಬಷೀರ್ ಅವರು ಹೇಳಿ ಆ ಆರನೇ ಲೇಖನವನ್ನು ಬರೆಯಲಿಲ್ಲ.

ಈ ವರ್ಷದ ಆದಿ ಭಾಗದಲ್ಲಿ ಪೆರುಮಾಳ್ ಮುರುಗನ್ ಎಂಬ ತಮಿಳು ಲೇಖಕರು ತಮ್ಮ ಪೆನ್ನನ್ನು ಕೈಯಿಂದ ಬಿಟ್ಟರು, ಪೆರುಮಾಳ್ ಮುರುಗನ್ ಎಂಬ ಲೇಖಕ ಇನ್ನು ಬದುಕಿ ಉಳಿದಿಲ್ಲ, ಕೇವಲ ಪಿ ಮುರುಗನ್ ಇನ್ನುಮುಂದೆ ಬದುಕಿರುತ್ತಾನೆ ಎಂದು ಹೇಳಿದ್ದರು. ಅದಕ್ಕೂ ಕಾರಣ ಯಾವುದೋ ಇನ್ನೊಂದು ಸೇನೆ. ಅವರು ಬರೆದ ಕಾದಂಬರಿಯೊಂದರಲ್ಲಿ ತಿರುಚೆಂಗೊಡುವಿನಲ್ಲಿ ನಡೆಯುವ ದೇವಸ್ಥಾನ ಜಾತ್ರೆಗೆ ಸಂಬಂದಪಟ್ಟ ಒಂದು ಸಂದಿಗ್ಧವಾದ ಸಂಪ್ರದಾಯದ ಸುತ್ತ ಕಥೆ ಸುತ್ತುವರಿಯುತ್ತದೆ. ಅದು ಶಿವನನ್ನು, ಹೆಂಗಸರನ್ನು, ಧರ್ಮವನ್ನು, ಇನ್ನೇನೆನ್ನನೋ ಟೀಕಿಸುತ್ತದೆ ಎಂದು ಕೆಲ ಗುಂಪುಗಳ ಅಭಿಪ್ರಾಯ. ಅದೆಷ್ಟೋ ಕಿರುಕುಳಕ್ಕೆ ಒಳಗಾದ ಮುರುಗನ್ ಅವರು ಇನ್ನೆಂದೂ, ಇನ್ನೇನನ್ನೂ ಬರೆಯುವುದಿಲ್ಲ ಎಂದು ಹೇಳಿಕೆ ಕೊಟ್ಟರು.

ಅದೆಷ್ಟೋ ಇಂತಹಾ ಘಟನೆಗಳು ರಾಷ್ಟೀಯ ಮಾಧ್ಯಮದ ಗಮನ ಸೆಳೆಯಲಾಗದೆ ಎಲ್ಲೋ ಮರೆಯಾಗಿ ಹೋಗುತ್ತಿವೆ. ವಾಕ್ ಸ್ವಾತಂತ್ರ್ಯದ ಇಂತಹಾ ದಾಳಿಗಳ ಹಿಂದಿರುವ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಚರ್ಚೆ ಇಲ್ಲಿ ಬೇಡ. ಇಲ್ಲಿರುವ ಪ್ರಶ್ನೆ ಸಾಂಸ್ಕೃತಿಕ ಇತಿಹಾಸ ಮತ್ತು ಅದರ ಪಾಲುದಾರರದ್ದು. ರಾಮಾಯಣದಂತಹಾ ಒಂದು ಮಹಾಕಾವ್ಯವನ್ನು ಪರಿಶೀಲಿಸಿದರೆ ಅದು ಒಂದು ಧರ್ಮ, ಜಾತಿಗೆ ಮೀರಿದ್ದು ಎಂದು ಸ್ಪಷ್ಟವಾಗುತ್ತದೆ. ಆ ಕಾವ್ಯದ ಮೌಲ್ಯಗಳು, ಕಥೆ - ಸಾಂಧರ್ಭಿಕ ಪ್ರಸ್ತಾಪಗಳು ದೇಶದ ಸಾಂಸ್ಕೃತಿಕ ವಲಯದ ಹಲವು ರಂದ್ರಗಳಲ್ಲಿ ಪಸರಿಸಿವೆ - ಆಡು ಭಾಷೆಯಲ್ಲಿ, ಜನಪದದಲ್ಲಿ, ಕಲಾ ಸಂಪ್ರದಾಯದಲ್ಲಿ. ಒಂದು ಧರ್ಮದ ಸ್ವತ್ತು ಎಂದೆನಿಸಿಕೊಂಡರೂ ದೇಶದ ಸಾಮೂಹಿಕ ಪ್ರಜ್ಞೆಯಲ್ಲಿ ಎಲ್ಲರಿಗೂ ಇಂತಹಾ ಸಾಂಸ್ಕೃತಿಕ ಸಂಪ್ರಯಾಯದಲ್ಲಿ ಪಾಲು, ಅದರ ಮೇಲೆ ಹಕ್ಕಿದೆ. ಮಹಾಕಾವ್ಯವೊಂದೇ ಅಲ್ಲ, ಇದು ಎಲ್ಲಾ 'ಜಾತಿ'ಗಳಿಗೆ ಸೇರಿರುವ ಸ್ಥಳ ಪುರಾಣ, ಹಾಡು-ನೃತ್ಯ, ಇನ್ನುಳಿದ ವಾಚಿಕ ಸಾಹಿತ್ಯಕ್ಕೂ ಅನ್ವಯಿಸುತ್ತದೆ.

ಮಹಾಕಾವ್ಯದ ವಿಷಯವನ್ನೇ ಮುಂದುವರಿಸುವುದಾದರೆ, ಪ್ರಸಿದ್ಧ ವಿಮರ್ಶಕ ಏ ಕೆ ರಾಮಾನುಜನ್ ಹೇಳುವ ಹಾಗೆ ಮುನ್ನೂರು ರಾಮಾಯಣ ಸಂಪ್ರದಾಯಗಳಿವೆ. ಕೆಲವೊಂದರಲ್ಲಿ ರಾಮ- ಸೀತೆ ಅಣ್ಣ ತಂಗಿಯಾಗಿರುತ್ತಾರೆ. ಈ ಮುನೂರು ರಾಮಾಯಣಗಳು ಸಾಮಾನ್ಯ ದಾಖಲೆಯಲ್ಲಿದ್ದರೆ ಇನ್ನದೆಷ್ಟೋ ದೇಶದೆಲ್ಲೆಡೆ ಹೆಚ್ಚು ಸಾರ್ವಜನಿಕವಾಗದೆ ಉಳಿದಿವೆ. ಆ ಪಟ್ಟಿಗೆ ಮಾಪಿಳ್ಳೆ ರಾಮಾಯಣ ಸೇರುತ್ತದೆ. ಇಪ್ಪತ್ತನೇ ಶತಮಾನದ ಆದಿಯಲ್ಲಿ ಜನಪ್ರಿಯಗೊಂಡ ಈ ಆವೃತ್ತಿಯಲ್ಲಿ ರಾಮ 'ಲಾಮ'ನಾಗುತ್ತಾನೆ. ಉದ್ದ ದಾಡಿಯ ಔಲಿಯೊಬ್ಬ ಹೇಳುವ 'ಲಾಮಾಯಣ'ದಲ್ಲಿ ಲಾಮನೊಬ್ಬ ಸುಲ್ತಾನ. ಮಾಪಿಳ್ಳೆ-ಪಾಟ್ ಎಂಬ ಜನಪದ ಶೈಲಿಯ ಹಾಡಿನ ಮೂಲಕ ಈ ಲಾಮಾಯಣದ ಸಾಲುಗಳನ್ನು ಹಾಡಿದ ಹಸ್ಸನ್ ಕುಟ್ಟಿಯ ಬಗ್ಗೆ ಒಂದಿಷ್ಟು ವಿಮರ್ಶೆ ನಡೆದಿದೆ. ದುರ್ದೈವವಶಾತ್ ಈ ಲಾಮಾಯಣದ ಐದರಲ್ಲಿ ಒಂದು ಭಾಗವಷ್ಟೇ ಉಳಿದುಕೊಂಡಿದೆ.

ಮೊನ್ನೆ ಕೇರಳದ ಸ್ನೇಹಿತನೊಂದಿಗೆ ಈ ಲಾಮಾಯಣದ ಹಾಡನ್ನು ಕೇಳುತ್ತಾ ಇದ್ದೆ. ತಲೆಯಲ್ಲೇ ಉಳಿಯುವಂತಹಾ ರಾಗ, ಮಜವಾದ ಸಾಲುಗಳು, ಮಲಬಾರ್ ಪ್ರಾಂತದಲ್ಲಿ ತೀರಾ ಸ್ಥಳೀಯವಾಗಿ ಬಳಸುವ ಮಲಯಾಳಂ ಶಬ್ದಗಳು. ಸೂರ್ಪಣಕೆ ರಾಮನನ್ನು ಒಲಿಸಲು ಪ್ರಯತ್ನಿಸುತ್ತಿದ್ದಾಗ ರಾಮ ಶರಿಯತ್ ಕಾನೂನನ್ನು ಉಲ್ಲೇಖಿಸುತ್ತಾನೆ. ಇದು ಆ ಧರ್ಮದ ಗ್ರಂಥವೆಂದು ನೋಡಲು ಬರುವುದಿಲ್ಲ. ವಾಕ್ ಸಂಪ್ರದಾಯದ ಒಂದು ಪ್ರಮುಖ ಅಂಶವೇನೆಂದರೆ ಪ್ರತಿಯೊಂದು ಕಥೆಯನ್ನು ತಮ್ಮದಾಗಿಸಿಕೊಳ್ಳುವುದು, ಆ ಆ ಪ್ರಾಂತ್ಯದಲ್ಲಿ ಪ್ರಚಲಿತವಿರುವ ಸಂಸ್ಕೃತಿಗೆ ಕಥೆ-ಕಾವ್ಯ-ಹಾಡನ್ನು ಅಳವಡಿಸುವುದು. ಇಂತಹಾ ಉಲ್ಲೇಖನಗಳಿಗೆಲ್ಲಾ ಧರ್ಮ, ಜಾತಿಯ ಬಣ್ಣ ನೀಡಿದರೆ ಈ ದೇಶದ, ಯಾಕೆ, ಈ ಜಗತ್ತಿನ ಪ್ರತಿಯೊಂದು ವಾಕ್ ಸಂಪ್ರದಾಯದ ನಿಜತ್ವವನ್ನು ಪ್ರಶ್ನಿಸಬೇಕಾಗುತ್ತದೆ.

ಒಂದು ದೇಶದ ಸಂಸ್ಕೃತಿ ಬೆಳೆಯುತ್ತಾ ಬಂದ ಪರಿಸರ. ಅದು ಬೆಳೆಯುತ್ತಲೇ ಇರುವಂತದ್ದು. ಇದನ್ನು ಬೆಳೆಸುವ, ನಿರಂತರವಾಗಿ ಬದಲಿಸುವ ವಾಸ್ತುಶಿಲ್ಪಿಗಳು - ಅದರ ಸಮಾನ ಹಕ್ಕುದಾರರು - ಪ್ರಮುಖವಾಗಿ ದಿನನಿತ್ಯವೂ ಅದರಲ್ಲಿ ಬದುಕುವವರು. ಬರಹಗಾರ, ಲೇಖಕ, ಕಲಾವಿದ ಎಂದೂ ಸಹ ಕರೆಯಲ್ಪಡುವವರು. ದಬ್ಬಾಳಿಕೆಯನ್ನು ಎದುರಿಸಿದಾಗ ಅದರ ವಿರೋಧ ಮಾಡುವುದು ಸಂಸ್ಕೃತಿಯ ಭಾಗವೊಂದನ್ನು ಸೃಷ್ಟಿಸುವವನ ಸಹಜ ಪ್ರತಿಕ್ರಿಯೆ. ಲೇಖಕನಿರಬಹುದು, ಅಲೆಮಾರಿ ಔಲಿಯಾಗಿರಬಹುದು. ರಾಜಕೀಯ, ಇನ್ನಿತರ ಬಣ್ಣಹೊಂದ ಸಂಕುಚಿತ ಮನೋಭಾವದಿಂದ ಎಲ್ಲವನ್ನು ನೋಡುವ ಈ ನಿರ್ಭಂದಿತ ವಾತಾವರಣ ಹರಡುತ್ತಿರಬೇಕಾದರೆ ಈ ನಮ್ಮ ಸಾಮೂಹಿಕ ಸಂಸ್ಕೃತಿಯೆಂಬುದು ಬೆಳೆಯುವುದಿರಲಿ, ನಿಂತ ನೀರಾಗಿಬಿಡುತ್ತದೆ.

ಜಗತ್ತಿನ ಯಾವ ಸಂಸ್ಕೃತಿಯೂ ಜಡವಲ್ಲ.
   

4 comments:

Nithin kamal A said...

I wish if i could read it.
but, i dont know kannada,
greetings from kerala.

Deepa Bhasthi said...

Thank you Nithin. Do read my other works on the blog instead.

Anonymous said...

Best line was the last one.

"No culture in the world is impoverished."

Deepa Bhasthi said...

"No culture in the world is stagnant."

Thank you.