Thursday, October 22, 2015

On Single Mothers and Adoptions, etc: Kannada Prabha Column

What is 'normal?' Who defines this normal in an age when everything that is is something that never was? When religion and the state becomes so closely meshed that either feed off the other to manipulate the larger society, it is a dangerous situation indeed. Relationships are being re-defined and everything is "normal" if you see it from the other perspective. Or nothing is.

I wrote about single mothers, about the need to find a new word for unmarried women (in Kannada) other than lonely and spinster and a bunch of other things in my column for Kannada Prabha this week, published Sunday, October 18, 2015.

ಸಹಜತೆಯ ಕತ್ತು ಹಿಸುಕುವ ಅಸಹಜ ನಿಯಮ ಸಂಕೋಲೆ

ಹಳೆಯ ಒಂದು ಕೆಲಸದಲ್ಲಿ ಇದ್ದಾಗ ತುಂಬಾ ಭಿನ್ನವಾದ ಜನರ ಪರಿಚಯವಾಗುತ್ತಿತ್ತು. ಮೇರಿಯ (ಅವಳ ನಿಜವಾದ ಹೆಸರಲ್ಲ. ಹೆಸರು ಸಂಕೇತಿಸುವ ಧರ್ಮ ನಿಜವಾದದ್ದು) ಪರಿಚಯ ಫ್ರೆಂಡ್ ಎನಿಸಿಕೊಳ್ಳುವಷ್ಟು ಇಲ್ಲದಿದ್ದರೂ ಒಂದು ದಿನ ಅದೆಲ್ಲೋ ಹೋಗುತ್ತಿರುವಾಗ ತನ್ನ ಮಗಳನ್ನು ಹೆತ್ತ ಕಥೆಯನ್ನು ಅದೇಕೋ ಗೊತ್ತಿಲ್ಲ ನನಗೆ ಹೇಳಬೇಕೆಂದು ಅನಿಸಿತು ಎಂದು ಹೇಳಿದಳು. ತನಗೆ ಮಗು ಬೇಕೆಂಬ ಹಂಬಲ ಅದೆಷ್ಟೋ ವರ್ಷಗಳಿಂದ ಇದ್ದು, ತನಗೆ ಹೊಂದಾಣಿಕೆಯಾಗುವಂತಹಾ ಗಂಡ ಅಥವಾ ಪಾರ್ಟ್ನರ್ ಸಿಗುವವರೆಗೆ (ಸಿಗದಿದ್ದರೆ?) ಕಾಯಲು ಆಗುವುದಿಲ್ಲ ಎಂದು ಮೇರಿ ಸ್ಪರ್ಮ್ ಬ್ಯಾಂಕ್ ಒಂದಕ್ಕೆ ಹೋಗಿ, ಕೃತಕ ಗರ್ಭಾಧಾನದ ಮೂಲಕ ಒಂದು ಮುದ್ದಾದ ಮಗಳನ್ನು ಹೆತ್ತಳು. ಆ ಮಗಳಿಗೆ ಈಗೇನು ೬-೭ ವರ್ಷಗಳಿರಬೇಕು. ಅವರಿಬ್ಬರಿಗೆ ನನ್ನ ಮನೆಯಲ್ಲಿ ಒಂದು ದಿನ ಲಂಚ್ ಕಾರ್ಯಕ್ರಮ ಇನ್ನು ಬಾಕಿ ಇದೆ.

ಮೇರಿಯಂತಹ ಅದೆಷ್ಟೋ ಹೆಂಗಸರಿಗೆ ಮಕ್ಕಳು ಬೇಕೆನ್ನುವ ಆಸೆ ಇರುತ್ತದೆ. "ಒಂಟಿ" ಹೆಣ್ಣು ಎನ್ನುವ ಶಬ್ದ ಈಗ ಅಪ್ರಸ್ತುತ ಶಬ್ದವಾಗಿದೆ. ಮದುವೆ ಆಗದವರು ಅಥವಾ ಮದುವೆ ಆಗಲು ಬಯಸದೆ ಇರುವವರು "ಒಂಟಿ", ತಂದೆ/ಗಂಡ/ಅಣ್ಣ/ಮಗನ ಮಗಳು/ಹೆಂಡತಿ/ತಂಗಿ/ತಾಯಿಯ ಬಿರುದು ಹೊರತುಪಡಿಸಿ ಹೆಣ್ಣಿಗೆ ಬೇರೆ ಗುರುತಿಲ್ಲ, ಒಬ್ಬ ವಿದ್ಯಾವಂತ, ಬುದ್ಧಿವಂತ ಹೆಣ್ಣಿಗೆ ತನ್ನ ಜೀವನಕ್ಕೆ ಬೇಕಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮರ್ತ್ಯ, ಹಕ್ಕು ಇಲ್ಲವೆಂದು ಭಾವಿಸುವ ಪುರುಷ ಪ್ರಧಾನ ಸಮಾಜವಿದು. ಅದರೂ ಅಲ್ಲೊಂದು ಇಲ್ಲೊಂದು ಸಾಮಾಜದ ಜೇಬಿನಷ್ಟು ದೊಡ್ಡ ತುಕುದುಗಳಲ್ಲಿ ಹಳೆಯ ನಿಯಮ-ನೀತಿಗಳು ಬದಲುತ್ತಿದರೂ ಈ ಬದಲಾವಣೆಯ ಸುಳಿವೇ ಇಲ್ಲವೆನ್ನುವ ಹಾಗೆ ನಡೆದುಕೊಳ್ಳುತ್ತಿರುವ ಸಂಸ್ಥೆಗಳಲ್ಲೊಂದು ಧರ್ಮ/ಜಾತಿ/ಮತ/ಮಠ. ಬೇರೆ ಬೇರೆ ಹೆಸರುಗಳ ಹಿಂದೆ ಅಡಗಿರುವ ಒಂದೇ ರೀತಿಯ ನ್ಯಾಯ-ನೀತಿ. ಧರ್ಮ/ಮಠ ಮತ್ತು ರಾಜ್ಯ/ರಾಜಕೀಯ. ಇದಕ್ಕಿಂದ ಅಪಾಯಕಾರಿ ಅಸ್ತ್ರ ಇರಲಾರದು.

ಹೀಗೊಂದು ಸುದ್ದಿಯಾಯಿತು. ಎರಡು ತಿಂಗಳ ಹಿಂದೆ ಮದರ್ ತೆರೇಸಾರವರ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯು ತಮ್ಮ ಹಲವಾರು ದತ್ತು ಕೇಂದ್ರಗಳನ್ನು ಮುಚ್ಚಿತು. ಕಾರಣ, ಕೇಂದ್ರ ಸರಕಾರವು ದೇಶದ ಎಲ್ಲಾ ದತ್ತು ಕಾಯಿದೆಗಳು ಒಂದು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಅಡಿಯಲ್ಲಿ ಬರಬೇಕೆಂದು ಹೊಸ ನಿರ್ದೇಶನ ನೀಡಿದೆ. ಲಕ್ಷಾಂತರ ರುಪಾಯಿಗಳ ಮಕ್ಕಳ ದತ್ತು ಕಾನೂನೂ ಬಾಹಿರ ವಹಿವಾಟನ್ನು ತಡೆಗೊಳಿಸುವ ಉದ್ದೇಶ ಹೊಂದಿರುವ ಈ ಹೊಸ ಪ್ರಾದಿಕಾರದ ನಿಯಮದ ಪ್ರಕಾರ ಯಾವುದೇ ದತ್ತು ಕೇಂದ್ರವು ದತ್ತು ಪಡೆಯಲು ಅರ್ಜಿ ಸಲ್ಲಿಸಿದ (ಕೆಲವೊಂದು ಅಗತ್ಯಗಳನ್ನು ಪೂರೈಸಿದರೆ) ಯಾರನ್ನೂ ಸಹ ನಿರಾಕರಿಸುವಂತಿಲ್ಲ. ಇನ್ನೂ ವಿವರವಾಗಿ ಹೇಳುವುದಾದರೆ ಮದುವೆಯಾಗದಿರುವವರು, ವಿಚ್ಛೇದನ ಪಡೆದವರು, ಸಹಲಿಂಗ ಪಾರ್ಟ್ನರ್ ಗಳು, ಎಲ್ಲರಿಗೂ ಸಹ ದತ್ತು ಪಡೆಯುವ ಹಕ್ಕಿದೆ. ಈ ಜಾತ್ಯಾತೀತ, "ನೈತಿಕತೆ"ಗೆ ನಿರ್ಭಂಧಕ್ಕೆ ಒಳಗಾಗದ ನಿಯಮಗಳು ತಮ್ಮ ಧರ್ಮದ ವಿರುದ್ದ ಹೋಗುವ ಕಾರಣ ಮಿಷನರೀಸ್ ಆಫ್ ಚಾರಿಟಿ ದತ್ತು ಕೇಂದ್ರ ಸೇವೆಯನ್ನೇ ನಿಲ್ಲಿಸಿದ್ದಾರೆ.

ಸಹಲಿಂಗ ದಾಂಪತ್ಯದಲ್ಲಿರುವವರು ದೇವರನ್ನು ಹುಡುಕುವುದಾದರೆ ತಡೆಯಲು ನಾನ್ಯಾರು, ಎಂದು ಪ್ರಶ್ನಿಸಿ ಕ್ಯಾಥೊಲಿಕ್ ಚರ್ಚಿನ ಧರ್ಮ ಗುರು ಪೋಪ್ ಫ್ರಾನ್ಸಿಸ್ ಎರಡು ವರ್ಷಗಳ ಹಿಂದೆ ಸಾಂಪ್ರದಾಯಿಕ ಕ್ರಿಶ್ಚಿಯನರನ್ನು ದಿಗ್ಬ್ರಮೆಗೊಳಿಸಿದ್ದರು. ಸಹಲಿಂಗ ಸಂಬಂಧದ ವಿಷಯ ಎಲ್ಲಾ ಜಾತಿಗಳಲ್ಲಿ ಇನ್ನೂ ಸಹ ಸೂಕ್ಷ್ಮವಾದ ಸಂಗತಿ. 'ನೀವು ಹೇಳಬೇಡಿ, ನಾವು ಕೇಳುವುದಿಲ್ಲ' ಎಂಬುವ ಅಭ್ಯಾಸ ಇನ್ನು ಮುಂದುವರಿಯುತ್ತಿರುವುದನ್ನು ಕಾಣಬಹುದು. ಇದು ಯಾವುದೇ ಒಂದು ಧರ್ಮದ ನಿಂದನೆಯೆಲ್ಲ. ಅದೆಷ್ಟೋ ವಿಷಯಗಳಲ್ಲಿ, ಕಟ್ಟು ನಿಟ್ಟುಗಳಲ್ಲಿ ಎಲ್ಲಾ ಧರ್ಮದ ನಿಲಿವು ಒಂದೇ.

ಧರ್ಮ, ಜಾತಿ ಎಂಬುವ ಸಂಸ್ಥೆಗಳು ಸರ್ವವ್ಯಾಪಿಯಾದ ಈ ದೇಶದಲ್ಲಿ ಯಾವುದೇ ಸಾಮಾಜಿಕ ವಿಷಯವನ್ನು ಧರ್ಮವನ್ನು ತೆಗೆದಿಟ್ಟು ಮಾತನಾಡುವಂತಿಲ್ಲ. ಸಹಲಿಂಗ ಸಂಬಂಧಗಳ ವಿಷಯ ಅದಿನ್ನೊಂದು ಅಂಕಣಕ್ಕಿರಲಿ. ಅದೆಷ್ಟೋ ಹೊಸ ಶತಮಾನಗಳು ಕಳೆದರು, ಇನ್ನು ಸಹ ಹೆಣ್ಣನ್ನು ಒಂದು ಯಥಾರ್ಥವಾದ ಚೌಕಟ್ಟಿನ ಒಳಗೇ ಇರಿಸುವ ಪ್ರಯತ್ನ ಮುಂದುವರಿಯುತ್ತಲಿದೆ. ಹೆಣ್ಣಿನ ಪಾತ್ರಗಳು ಹೀಗಿರಬೇಕು, ಕುಟುಂಬ ಎಂಬ ಘಟಕ ಇಂತಹಾ ಒಂದು ಪರಿಮಿತಿಯ ಒಳಗೆ ಇರಬೇಕು, ತಂದೆ-ತಾಯಿ ಇಬ್ಬರ ಆರೈಕೆ ಇದ್ದರೆ ಮಾತ್ರ ಮಗು ಸಮಾಜಕ್ಕೆ ಒಪ್ಪುವ ನಾಗರೀಕನಾಗಿ ಬೆಳೆಯಬಹುದು ಎಂಬೆಲ್ಲಾ ಗೊಡ್ಡು ನಂಬಿಕೆಗಳನ್ನು ಮುಂದುವರಿಸುವುದರಲ್ಲಿ ಮೂಲವಾಗಿ ಧರ್ಮವಲ್ಲದಿದ್ದರು ಧರ್ಮಗುರುಗಳ ಪಾತ್ರವನ್ನು, ಧರ್ಮದ ಕಾಲಸಂದ ನೀತಿಗಳನ್ನು ತಮ್ಮ ಅನುಕೂಲಕ್ಕೆಂದು ಬಳಸುವ ರಾಜಕಾರಣಿಗಳನ್ನು, ಇಂತಹಾ ಅಭ್ಯಾಸಗಳ ಪ್ರಭಾವವನ್ನು ಆಲಕ್ಷಿಸುವಂತಿಲ್ಲ. ಇಂತಹಾ ಅಭ್ಯಾಸಗಳಲ್ಲಿರುವ ಅಪಾಯವನ್ನು ಅಸಡ್ಡೆ ಮಾಡುವಂತಿಲ್ಲ.

ಈ ಧರ್ಮ/ಮಠದ ನಿಯಮ, ಕಟ್ಟುಪಾಡುಗಳು ಮತ್ತು ಸರ್ಕಾರ, ಅಥವಾ ಸಮಾಜ ಶಾಸ್ತ್ರದಲ್ಲಿ ಹೇಳುವ ಹಾಗೆ 'ರಾಜ್ಯ' ಹೊಲಿದ ರೇಖೆಯೇ ಕಾಣದಂತೆ ಸೇರಿಕೊಂಡಾಗ ಅವಾಂತರ ತಪ್ಪಿದಲ್ಲ. ಇನ್ನು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸರಿಯಾಗಿ ಸ್ಪಂದಿಸುವ ಮಾತೆಲ್ಲಿ?

ಬದಲಾವಣೆ ಸಹಜವಾದದ್ದು. ಅನಿವಾರ್ಯವಾದುದ್ದು. ಇಂತಹಾ ಬದಲಾವಣೆಗಳಿಗೆ ಸ್ಪಂದಿಸದ ಧರ್ಮ, ರಾಜಕಾರಣ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ನಾಸ್ತಿಕದತ್ತ ದಾರಿ ಹಿಡಿಯುವವರು, ಹೊಸ ಕಲ್ಟ್ ಗಳತ್ತ ಆಕರ್ಷಿತಗೊಳ್ಳುವವರು, ಇನ್ನ್ಯಾವುದೋ ಧರ್ಮದ ಸೆಳೆತಕ್ಕೆ ಓ ಎನ್ನುವವರು...ಅಥವಾ ಮೇರಿಯಂತಹಾ 'ವಿಚಿತ್ರ' 'ಅಸಹಜ' ಅಸಾಧಾರಣ' ವಲ್ಲದವರ ಸಂಖ್ಯೆ ಕೋಟಿಯಲ್ಲಿ ಇಲ್ಲವೇನೋ. ಆದರೆ ಅಲ್ಪಸಂಖ್ಯೆಯಲ್ಲಿದ್ದರೆ ನಿರ್ಲಕ್ಷಿಸಬೇಕೆ?

ಧರ್ಮ, 'ಮಾರಲ್ ಪೋಲಿಸ್' ಅದೇನೇ ಹೇಳಿದರು ಒಂದಿಷ್ಟು ಜನರು ತಮ್ಮ ಹೊಸ 'ನಾರ್ಮಲ್' ಅನ್ನು ನಿರ್ಮಿಸುತ್ತಲೇ ಇರುತ್ತಾರೆ. ಹೇಗೆ ಕೆಲವರಿಗೆ ಸಾಂಪ್ರದಾಯಿಕ ಕುಟುಂಬ, ಸಂಸಾರದ ಚೌಕಟ್ಟು ಸಹಜ ಎಂದೆನಿಸುತ್ತದೋ ಅದೇ ರೀತಿ ಮೇರಿ ಅಥವಾ ಇನ್ನಾರೋ ಒಬ್ಬರೇ ಮಗುವನ್ನು ಬೆಳೆಸುತ್ತೇವೆ ಎಂದು ನಿರ್ಧಾರ ತಗೊಂಡವರು ನಾರ್ಮಲ್ ಆಗುತ್ತಾರೆ, ಅವರದ್ದೇ ವಲಯದಲ್ಲಿ. ಈ ವಲಯವನ್ನು ವಿಸ್ತರಿಸಿ ಎಲ್ಲಾ ವೇದಿಕೆಗಳಲ್ಲಿಯೂ ಸಹಜ, ನಾರ್ಮಲ್ ಎಂದೆನಿಸುವ ಹಾಗೆ ಮಾಡುವ ಜವಾಬ್ದಾರಿ ಸಾಮಾಜಿಕ ಸಂಸ್ಥೆಗಲಿಗಿದೆ - ಧರ್ಮವಿರಬಹುದು, ರಾಜಕೀಯವಿರಬಹುದು. ಇಂತಹಾ ಸಂಸ್ಥೆಗಳನ್ನು ಮುಂದುವರಿಸುವವರು ನನ್ನ ನಿಮ್ಮಂತವರು, ಅಲ್ಲವೇ?

ಯಾವುದು ನಾರ್ಮಲ್, ಯಾವುದು ಸಹಜ, ಯಾವುದು ನೈತಿಕ ಎಂಬುದು ವ್ಯಕ್ತಿಗತವಾದ ವಿಷಯಗಳು. ಇಂತಹಾ ಸರಳ ಮಾತೊಂದನ್ನು ಅರ್ಥೈಸಿಕೊಂಡು, ನೆನಪಿನಲ್ಲಿಟ್ಟುಕೊಂಡು ಅದರ ಪ್ರಕಾರ ನಡೆದುಕೊಳ್ಳುವುದು ಕೋಟ್ಯಾಂತರ ವರ್ಷಗಳಿಂದ ವಿಕಸನಗೊಂಡು ಇಲ್ಲಿಯವರೆಗೆ ಬೆಳೆದುಬಂದ ನಮಗೆ ಅಷ್ಟೊಂದು ಕಷ್ಟವೇ?

No comments: