Wednesday, December 02, 2015

On Dogs and Deepawali: Binkana Column in Kannada Prabha

So I finally, finally fulfilled a very old dream and adopted a puppy of my own. Rudra, a mostly-white with black and brown spots indie, a little terror and my inseparable love joins my other, older boy Kobri in the family. More on him later. 

Now I love festivals, the bling, the food, the rituals, everything. But Deepawali/Diwali in the city is something I have always run away from, because of the unbearable and vomit-inducing sounds and smells of the fire crackers. R was too young to leave, K was shivering for the entirety of the three days and I stayed in the house, cursing the festival constantly. Work came to a standstill as we took turns sitting and hugging K, talking to him constantly. Thankfully it rained. We drove to the airport and hung out there, we tried driving in the outskirts, we shut his ears tight, we tried everything. And my heart went out to the hundreds of birds and dogs and cats that suffer these three days on the open streets. 

What is the joy in making noise in an already noisy city is beyond me. Next year, we will go away to the jungles perhaps with these two boys.

All this and more in my Binkana column last Sunday in Kannada Prabha, published November 22, 2015.

ಎಂತೆಂತಹಾ ಜನ ಇರ್ತಾರೆ ಅಂತೀರಾ. ಮೊನ್ನೆ ಒಬ್ಬರ ಮನೆಗೆ ಹೋಗಿದ್ದೆ. ಹೋದ ಕಾರಣ ಮುಂದೆ ಹೇಳುತ್ತೇನೆ. ಅವರ ಮನೆಯಲ್ಲಿ ಹದಿನೈದು ನಾಯಿಗಳು, ಕೆಲವು ತಿಂಗಳುಗಳಿಂದ ಹಿಡಿದು ಅದೆಷ್ಟೋ ವರ್ಷ ವಯಸ್ಸಾದವು. ಬೀದಿಯಿಂದ, ಮನುಷ್ಯರಿಂದ 'ರೆಸ್ಕ್ಯೂ' ಮಾಡಲಾದ ನಾಯಿಗಳಿವು. ಈತನ ಕೆಲಸವೇ ಅದು, ನಾಯಿಗಳನ್ನು ರೆಸ್ಕ್ಯೂ ಮಾಡಿ, ಅವುಗಳನ್ನು ಯಾರಾದರು ದತ್ತು ತಗೊಂಡು ಹೋಗುವವರೆಗೆ ನೋಡಿಕೊಳ್ಳುವುದು. ಅವನದ್ದೆ ಮೂರು ನಾಯಿಗಳಿವೆ, ಅದರಲ್ಲೊಂದು ಹ್ಯೂಗೋ ಎಂಬ ಹೆಸರಿರುವ ಜರ್ಮನ್ ಶೆಪರ್ಡ್. ಅವನಲ್ಲಿಗೆ ಬರುವಾಗ ಬಹಳ ಶೋಚನೀಯ ಸ್ತಿತಿಯಲ್ಲಿ ಅದಿತ್ತಂತೆ. ಯಾರೋ ಕ್ರೂರಿಗಳು ಅದರೆರಡು ಕಿವಿಗಳನ್ನು ಕತ್ತರಿಸಿ ಬೀದಿಯಲ್ಲಿ ಬಿಟ್ಟಿದ್ದರಂತೆ. ಈಗ ಅವನ ಆರೈಕೆಯಿಂದ ಗುಣವಾಗಿದೆ. ನಾನು ನೋಡಿದ ಅದೆಷ್ಟೋ ನಾಯಿಗಳಲ್ಲಿ ಹ್ಯೂಗೋ ದಷ್ಟು ಶಾಂತವಾದ, ಜನರಿಗೆ, ಇನ್ನಿತರ ನಾಯಿಗಳಿಗೆ ತುಂಬಾ ಪ್ರೀತಿ ತೋರಿಸುವ ನಾಯಿಗಳ ಸಂಖ್ಯೆ ಬೆರಳುಗಳಲ್ಲಿ ಎಣಿಸಬಹುದು. ಆ ಬೆಕ್ಕು-ನಾಯಿಗಳನ್ನು ರೆಸ್ಕ್ಯೂ ಮಾಡುವವನ ಆರೈಕೆಯೇ ಕಾರಣ. ಎಂತೆಂತಹಾ ಜನ ಇರ್ತಾರೆ ನೋಡಿ.

ಬೆಂಗಳೂರಿನಲ್ಲಿ ಒಳ್ಳೆ ಚಳಿ, ಕೆಲ ದಿನಗಳಿಂದ. ಮೊನ್ನೆ ಜೋರು ಮಳೆಯೂ ಬರುತ್ತಿತ್ತು. ಹನಿ ಮಳೆ ಬಂದರೆ ಸಾಕು, ಈ ಮಹಾನಗರದ ರಸ್ತೆ ಬೀದಿ ಗಳಲ್ಲಿ ಆಗುವ ಅಸ್ತ-ವ್ಯಸ್ತ ಬೇರೆಯೊಂದು ಪ್ರಭಂದದ ವಿಷಯ, ಬಿಡಿ. ಇಂತಹಾ ಒಂದು ಮಳೆಯಲ್ಲಿ, ಒಂದು ವಿಂಟೇಜ್ ಕಾರಿನಲ್ಲಿ, ಜಿಪಿಎಸ್ ಕೆಲಸ ಮಾಡದ ಕಾರಣ ಅಲ್ಲಿ-ಇಲ್ಲಿ ದಾರಿ ಕೇಳಿಕೊಂಡು ಆ ಅನಿಮಲ್ ರೆಸ್ಕ್ಯೂ ಮಾಡುವವನ ಮನೆಗೆ ದಾರಿಮಾಡಿದೆವು. ಐಶೊ ಆರಾಮಿನ ಬಂಗಲೆಗಳ ಮಧ್ಯೆ ಇವನ ವಿಲ್ಲಾ. ಗೇಟಿನಿಂದ ಒಳ ಹೋಗಲು ಬಿಡದಷ್ಟು ಸಂಭ್ರಮ ಪಡುತ್ತಿದ್ದ ನಾಯಿ ಮರಿಗಳು. ಹೆಚ್ಚು ಕಮ್ಮಿ ನಾನು ಹುಟ್ಟಿದ ದಿನದಿಂದಲೇ ಮನೆಯಲ್ಲಿ ನಾಯಿಗಳ ಜೊತೆ ಬೆಳೆದು, ನಾಯಿಗಳು ನಾಯಿಗಳಲ್ಲ, ಮನೆಯ ಇನ್ನೊಂದು ಸದಸ್ಯ ಎಂದು ನೋಡಲು ಕಲಿತ ನನಗೆ ಈ ನೋಟಕ್ಕಿಂತ ಬೇರೆ ಸಂತೋಷ ಇರದು. ಉದ್ದ ಕಥೆಯೊಂದನ್ನು ಚುಟುಕುಗೊಳಿಸಿ ಹೇಳಬೇಕೆಂದರೆ, ಅಂದು ಸಂಜೆ ಆ ಕಾರಿನಲ್ಲಿ ಹಿಂತಿರುಗ ಬರಬೇಕಾದರೆ ನನ್ನ ಮಡಿಲಲ್ಲಿ ಒಂದು ೪೫ ದಿನದ, ಬಿಳಿ ಮೈಯ್ಯ ಮೇಲೆ ಕಪ್ಪು ಚುಕ್ಕಿಗಳು, ಬ್ರೌನ್ ಮುಖ ಹೊಂದಿದ ಮರಿಯೊಂದು ಮಲಗಿತ್ತು. ಇಂಗ್ಲಿಷ್ ನಲ್ಲಿ ಹೇಳಬೇಕಾದರೆ 'ಇಂಡಿ', ನಮ್ಮ ಈ ಆಡು ಭಾಷೆಯಲ್ಲಿ, ನಾಯಿ ಜಾತಿಯದ್ದು. ಸ್ಟೇಟಸ್, ಸ್ಟೈಲ್ ಗೆಂದು ಸಾವಿರಾರು ರೂಪಾಯಿಗಳನ್ನು ಸುರಿದು ಅದ್ಯಾವುದೋ ಬ್ರೀಡ್/ಜಾತಿ ನಾಯಿಯನ್ನು ಕೊಳ್ಳುವುದರ ಬದಲು ಪೋಷಣೆಗೆ ಸುಲಭವಿರುವ ಅದೆಷ್ಟೋ ಬೀದಿಗೆ ಬಿಸಾಡಿರುವ ಮುದ್ದಾದ ಇಂಡಿಗಳನ್ನು ದತ್ತು ತಗೊಳ್ಳುವುದು ವಾಸಿಯಲ್ಲವೇ?

ಮನೆಗೆ ಬಂದ ನಾಯಿ ಮರಿಗೆ ನಾಮಕರಣ ಮಾಡಿದ್ದು ರುದ್ರ ಎಂದು. ಹೆಸರಿನಂತೆ ಜೋರಾಗಿರಲಿ ಎಂಬ ಆಸೆ. ಆ ಲಕ್ಷಣಗಳು ಅದಿನ್ನೂ ಕಂಡುಬರುತ್ತಿಲ್ಲ ಎಂಬುದು ಬೇರೆ ವಿಷಯ. ಮನೆಗೆ ಬರುವ ಗೆಳೆಯರೆಲ್ಲ ರುದ್ರಪ್ಪನಿಗೆ ಆಟವಾಡುವ ವಸ್ತುಗಳು, ನಾನು ಸಹ, ಮನೆಯಲ್ಲಿರುವ ಮರದ ಫರ್ನಿಚರ್, ದಿಂಬುಗಳು, ಗಿಡಗಳು, ಕಣ್ಣಿಗೆ ಕಂಡದ್ದು ಅದೆಲ್ಲ ಕಚ್ಚುವ, ಆಟವಾಡುವ ವಸ್ತುಗಳು. ಕರ್ಮ ಕಾಂಡ.

ದೀಪಾವಳಿ ಮತ್ತು ಪ್ರಾಣಿಗಳ ವಿಷಯಕ್ಕೆ ಬರಬೇಕಾದರೆ ಇಲ್ಲಿ ನಾಯಿ, ಜನರ ಬಗ್ಗೆ ಒಂದಕ್ಕೊಂದು ಸಂಬಂಧ ಇಲ್ಲದಂತಹಾ ಸಾಲುಗಳ ಬರೆದಿದ್ದೇನೆ. ಪೀಟಿಕೆ ಎಂದು ತಿಳಿದುಕೊಳ್ಳಿ. ಪ್ರತಿ ವರ್ಷ ಗಣೇಶ ಚತುರ್ಥಿಗೆ ಆರ್ಗಾನಿಕ್ ಗಣೇಶ ಕೊಳ್ಳಿ ಎಂಬುವ ಜಾಹಿರಾತುಗಳು, ಪತ್ರಿಕೆಯಲ್ಲಿ ಲೇಖನಗಳಾದರೆ, ದೀಪಾವಳಿ ಬಂತೆಂದರೆ ಸಾಕು ಪಟಾಕಿ ಹೊಡೆಯುವಾಗ ಹುಷಾರು, ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಮಾತ್ರ ಪಟಾಕಿ ಸುಡಿಯಬೇಕು, ಆದಷ್ಟು ಬಾಂಬ್ ಗಾತ್ರದ ಪಾತಕಿಗಳನ್ನು ಹೊಡೆಯಬೇಡಿ ಎಂದೆಲ್ಲಾ ಕೇಳಿಬರುತ್ತದೆ. ನಮ್ಮ ಜನ ಗೊತ್ತಲ್ಲ, ಇದ್ಯಾವುದನ್ನು ಪಾಲಿಸುವ ಗೌಜಿಗೆ ಹೋಗುವುದಿಲ್ಲ. ಬೆಳಕು ಮತ್ತು ಬಾಂಬಿನ ಮಧ್ಯೆ ನಾಯಿ, ಬೆಕ್ಕು, ಹಕ್ಕಿಗಳ ಕೂಗು ಒಂದು ಮಾಲೆ ಪಟಾಕಿಯ ಸದ್ದಿನಲ್ಲಿ ಮಾಯವಾಗುತ್ತದೆ.

ಪ್ರಾಣಿಗಳ ಕಿವಿ ಮನುಷ್ಯರ ಕಿವಿಗಿಂತ ಸೂಕ್ಷ್ಮವಾಗಿರುವುದರಿಂದ ಪಟಾಕಿಯ ಸದ್ದು ಅವಕ್ಕೆ ವಿಪರೀತ ಜೋರಾಗಿ ಕೇಳಿಸುತ್ತದೆ. ಧಿಡೀರ್ ಬಾಂಬ್ ಪಟಾಕಿ ಹೊಡೆದಾಗ ಅದೆಷ್ಟೋ ಹಕ್ಕಿಗಳಿಗೆ ಹೃದಯಾಘಾತವಾಗುವುದುಂಟು. ಮನೆಯಲ್ಲಿ ಸಾಕಿದ ನಾಯಿ-ಬೆಕ್ಕುಗಳು ಶಬ್ಧಕ್ಕೆ ಹೆದರಿ ಅದರಿಂದ ಓಡುವ ಬಿರಿಸಿನಲ್ಲಿ ದಾರಿ ತಪ್ಪಿ ಬೀದಿ ಪಾಲಾಗುವುದುಂಟು.

ಹಬ್ಬಗಳೆಂದರೆ ನನಗಿಷ್ಟ. ದೀಪವಳಿಗಂತೂ ಈ ಮಹಾನಗರದ ಶಬ್ದ, ವಾಯು ಮಾಲಿನ್ಯ ತಡೆಯಲಾಗದೆ ಊರಿಗೆ ಓಡುವ ವಾಡಿಕೆ ನನ್ನದು. ಈ ವರ್ಷ ಎರಡು ನಾಯಿಗಳನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ? ಒಂದು ದಿನ ಒಂದನ್ನು ಕಾರಿಗೆ ಹಾಕಿ ಸಿಟಿಯ ಹೊರವಲಯದಲ್ಲಿ ಸುಮ್ಮನೆ ಸುತ್ತಿ ಸುತ್ತಿ ಡ್ರೈವ್ ಮಾಡಿದ್ದಾಯಿತು. ಮಾರನೆಯ ದಿನ ಎರಡರನ್ನು ಕರೆದುಕೊಂಡು ಏರ್ಪೋರ್ಟ್ ಗೆ ಹೋಗಿ, ಅಲ್ಲಿ ಪಾರ್ಕಿಂಗ್ ಲಾಟ್ ನಲ್ಲಿ ನಿಂತು ದುಬಾರಿ ಕಾಫಿ ಕುಡಿದದ್ದಾಯಿತು. ಮನೆಯಲ್ಲಿ ಸೋಫಾದ ಮೇಲೆ ಕೂರಿಸಿ ಹತ್ತಿರ ಕುಳಿತು ತಲೆ ಸವರುತ್ತಾ ಹನ್ನೊಂದು ಗಂಟೆಯವರೆಗೆ ಕಾಲ ನೂಕಿದ್ದಾಯಿತು. ಸಾಕಿದ ನಾಯಿಗಳ ಪಾಡೇ ಹೀಗಾದರೆ ಬೀದಿ ನಾಯಿಗಳ ಗತಿ ಏನಾಗಬಹುದು?

ಜಗತ್ತಿನ ಅದೆಷ್ಟೋ ದೇಶದ ದೊಡ್ಡ ನಗರಗಳಲ್ಲಿ ಪಟಾಕಿಗಳ ಕುರಿತಾಗಿ ಕಾಯ್ದೆ ಕಾನೂನುಗಳಿವೆ. ಬಾಂಬ್ ನಂತಹಾ ಶಬ್ದ ಮಾಡುವ ಪಟಾಕಿಗಳು ನಿಷೇದಿಸಿದ್ದು, ಬೇರೆ ರೀತಿಯ ಪಟಾಕಿಗಳನ್ನು ಸಹ ಎಲ್ಲೆಂದೆರಲ್ಲಿ ಹೊಡೆಯುವಂತಿಲ್ಲ. ಇದಕ್ಕೆಂದೇ ಒಂದು ದೊಡ್ಡ ಮೈದಾನವನ್ನು ಮೀಸಲಿಡಲಾಗುತ್ತದೆ. ಎಷ್ಟೋ ಕಡೆ ಹದಿನೆಂಟು ವರ್ಷದ ಒಳಗಿನ ಮಕ್ಕಳು ಪಟಾಕಿಯನ್ನು ಸುಡುವಂತಿಲ್ಲ. ನಮ್ಮಲಿಯು ಇಂತಹ ಕಾನೂನು ಇದೆಯೋ ಏನೋ, ನಾನರಿಯೆ.

ಕಾನೂನು ಇದ್ಧರೂ ಇಲ್ಲದಿದ್ದರೂ ಮನುಷ್ಯತ್ವ ಇರಬಹುದಲ್ಲವೇ? ವಯಸ್ಸಾದವರಿಗೆ, ಚಿಕ್ಕ ಮಕ್ಕಳಿಗೆ, ಪ್ರಾಣಿಗಳಿಗೆ ಆಗುವ ಹಿಂಸೆ ಅದರ ವಿರುದ್ದ ಕನೂನೊಂದಿದ್ದರೆ ಮಾತ್ರ ತಡೆಹಿಡಿಯುವಂತದ್ದಾಗಿರಬೇಕೇ? ದನ ಕರುವಿನ ಬಗ್ಗೆ ಅದೆಷ್ಟೋ ಉದ್ರೇಕವಾಗಿ ಮಾತನಾಡುವವರಿಗೆ ನಾಯಿ, ಬೆಕ್ಕು, ಹಕ್ಕಿ, ಬೇರೆ ಪ್ರಾಣಿಗಳ ಕಣ್ಣಲ್ಲಿರುವ ಹೆದರಿಕೆ ಅದೇಕೆ ಕಾಣುವುದಿಲ್ಲವೋ ಏನೋ.

ಬಹುಷಃ ಈ ಪ್ರಾಣಿಗಳಿಗೂ ಸಹ ಧರ್ಮ ಒಂದರ ಕವಚವನ್ನು ಹೊದಿಸಿ, ಧಾರ್ಮಿಕ ಕಟ್ಟುಕಥೆಗಳಲ್ಲಿ ಕೊಂಡಾಡಿ ಅಟ್ಟಕ್ಕೆ ಏರಿಸಿದರೆ ಜನರ ಮೋಜಿಗೆಂದು ಅವಕ್ಕಾಗುವ ಹಿಂಸೆ ಸರಿಹೋಗಬಹುದೋ ಏನೋ.

No comments: