Monday, April 04, 2016

On Selfies: Binkana Column in Kannada Prabha

The Briton Ben Innes did something foolish. He posed for a photo with the EgyptAir hijacker Saif al-din Mustafa, grinning away for having the "selfie of a lifetime". They say it was a ploy to get the hijacker's photo to send to the police. I'm not so sure about that. Anyway, I wrote about the foolishness, stupidity, vanity and everything else in Kannada Prabha this last Sunday. See below, the unedited version (will have spelling errors, please ignore - I still haven't learnt to type in Kannada).

Published April 03, 2016

ಏನೆಂದು ಹೆಸರು ಇಡಲಾಗದ ವಿಚಿತ್ರ ಸಂಗತಿಗಳ ಗುಚ್ಚವೀ ಸೆಲಫಿ

ತನ್ನ "ಬೆಸ್ಟ್ ಸೆಲಫಿ" ಅದಂತೆ. ಬೆನ್ ಇನ್ನೆಸ್ ಎಂಬುವ ಬ್ರಿಟನಿನ ಆರೋಗ್ಯ ಮತ್ತು ಸುರಕ್ಷತೆ ಆಡಿಟರ್ ಒಬ್ಬ ಮೊನ್ನೆ ಹೈಜಾಕ್ ಆದ ಈಜಿಪ್ಟ್ ಏರ್ ವಿಮಾನದಲ್ಲಿ ಪ್ರಯಾಣಿಕನಾಗಿದ್ದ. ಸೇಫ್ ಅಲ್-ದಿನ್ ಮುಸ್ತಫಾ, ವಿಮಾನವನ್ನು ಸೈಪ್ರಸ್ ದ್ವೀಪಕ್ಕೆ ಬಲವಂತವಾಗಿ ತಿರುಗಿಸಿಸಿದ ಹೈಜ್ಯಾಕರ್ ನ ಜೊತೆ ಬೆನ್ ಒಂದು ಫೋಟೋವನ್ನು ತೆಗೆಸಿಕೊಳ್ಳುತ್ತಾನೆ. ಈ ಫೋಟೋದಲ್ಲಿ ಬೆನ್ ಅದೆಷ್ಟೋ ಸಂತೋಷವಾಗಿ ಕಾಣುತ್ತಾನೆ, ಈ.... ಎಂದು ನಗುತ್ತಿರುವುದು ಕಾಣುತ್ತದೆ. ಪಕ್ಕದಲ್ಲಿರುವ ಮುಸ್ತಫಾನ ಮುಖದಲ್ಲಿ ಒಂದು ಅತಿ ಸಣ್ಣ ಮುಗುಳ್ನಗು ಮೂಡುತ್ತಾ ಇದೆ, ನಗಲೋ ಬೇಡವೋ ಎಂದು ಇನ್ನೂ ನಿರ್ಧಾರಮಾಡದಿರುವ ಹಾಗೆ. ಸಿನಿಮಾ ಸ್ಟಾರ್ ಗಳು, ಗಾಯಕರು, ಇನ್ನ್ಯಾವುದೋ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳು ಕೇಳಿದ ಸೆಲಫಿಗಳಿಗೆ ಪೂರ್ತಿ ಮನಸಿಲ್ಲದಿದ್ದರೂ ಒಂದು ರೀತಿಯ ತಮ್ಮ ಹಣೆಬರಹ/ಕರ್ತವ್ಯ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಪೋಸ್ ಮಾಡಿದ ಹಾಗೆ ಮುಸ್ತಫಾ ಪೋಸ್ ಮಾಡುತ್ತಾನೆ.

ಬೇರೆಯಾರೋ ತೆಗೆದ ಫೋಟೋ ಇದು, 'ಸೆಲಫಿ' ಅಲ್ಲ. ಆದರೂ ಜೀವಮಾನದಲ್ಲಿ ತೆಗೆದ ಬೆಸ್ಟ್ ಸೆಲಫಿ ಎಂದು ತನ್ನ ಸ್ನೇಹಿತರಿಗೆ ಕಳಿಸಿದ ಈ ಫೋಟೋ ಅಂತರ್ಜಾಲದಲ್ಲಿ 'ವೈರಲ್' ಆಗಿ ತೇಲಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಯಿತು. ಮುಸ್ತಫಾನ ಫೋಟೋವನ್ನು ತೆಗೆದು ಪೊಲೀಸರಿಗೆ ಕಳಿಸಲು ಮಾಡಿದ ಪ್ಲಾನ್ ಇದು ಎಂದು ಯಾವುದೋ ಲಂಡನಿನ ಪತ್ರಿಕೆಯಲ್ಲಿ ಇಂದಷ್ಟೇ ಓದಿದೆ. ಅಕಸ್ಮಾತು ಹಾಗೆಂದೇ ಇದ್ದರು ಫೋಟೋ ತೆಗೆದು ಬೆನ್ ಮೊದಲು ಕಳಿಸಿದ್ದು ತನ್ನ ಸ್ನೇಹಿತರಿಗೆ, ವಾಟ್ಸ್ಆಪ್ ಮೂಲಕ, ಜಂಬಕೊಚ್ಚುವ ಸಂದೇಶದ ಜೊತೆಗೆ. ಈಗಿನ ನಮ್ಮ ವರ್ಚುಅಲ್ ಜೀವನವದ, ಅದರಿಂದ ಪ್ರೇರೇಪಿತವಾಗುವ ಆಲೋಚನೆ, ನಡವಳಿಕೆಗಳ ಸೂಕ್ತ, ಸಂಕ್ಷಿಪ್ತ ಪ್ರಾತಿನಿಧ್ಯ ಈ ಒಂದು ಫೋಟೋ ಮಾಡುತ್ತದೆ.

"ಈಗಿನ ಕಾಲದ ಮಕ್ಕಳು...." ಎಂದು ತಲೆಯಾಡಿಸುವಷ್ಟು ವಯಸ್ಸು ನನಗಾಗದಿದ್ದರು ಇಂತಹಾ - ಏನೆಂದು ಹೇಳಲಿ? - ಮೂರ್ಖತನ, ಗರ್ವ, ಜೀವನದ ಪ್ರತಿ ಕ್ಷಣವನ್ನು ಹಂಚಿದರೆ ಮಾತ್ರ ಆ ಗಳಿಗೆಯನ್ನು ಅನುಭವಿಸದ ತೃಪ್ತಿ ಸಿಗುತ್ತದೆ ಎಂದು ಗ್ರಹಿಸುವ ಪೀಳಿಗೆಯ ಮತ್ತು ನನ್ನ ಪರಿಚಯದವರು, ಸ್ನೇಹಿತರ, ಸಮಕಾಲೀನ ಪೀಳಿಗೆಯ ಮಧ್ಯೆ ಅದೆಷ್ಟೋ ಘಾಡ ಅಂತರವಿರುವ ಹಾಗೆ ಅನಿಸುತ್ತದೆ. ವಾಸ್ತವದಲ್ಲಿ ಹೆಚ್ಚೆಂದರೆ ೬-೭ ವರ್ಷಗಳ ಅಂತರವಷ್ಟೇ. ಈ ಫಾಸ್ಟ್ ಯುಗದಲ್ಲಿ ಪೀಳಿಗೆಗಳ ಮಧ್ಯೆ ಇರುವ ಅಂತರ ಮೊದಲಿಗಿಂತ ಅದೆಷ್ಟೋ ಫಾಸ್ಟ್ ಆಗಿ ಮೂಡುತ್ತದೆಯೋ ಏನೋ. ಬಾಲ್ಯದಲ್ಲಿ ಕಂಪ್ಯೂಟರ್ ಶಬ್ದವೇ ಅರಿಯದೆ ಬೆಳೆದು ಈಗ ಅದಿಲ್ಲದೆ ಕೆಲಸ ಮಾಡಲು ಅಸಾಧ್ಯವೆಂಬ ಸ್ಥಿತಿಗೆ ತಲುಪಿದ ತಲೆಮಾರು ನನ್ನದು. ಸೆಲಫಿ ತೆಗೆಯುವವರು, ಮಾಡಿದ್ದನ್ನೆಲ್ಲಾ ಫೇಸ್ ಬುಕ್ ನಲ್ಲಿ ಹಾಕುವವರು ನನ್ನ ಸಮಕಾಲೀನರಿಲ್ಲ, ನನಗಿಂತ ಅದೆಷ್ಟೋ ಹಿರಿಯರಿಲ್ಲ ಎಂದು ಖಂಡಿತವಾಗಿಯೂ ನಾನು ಪ್ರಕಟಿಸುತ್ತಿಲ್ಲ. ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಪ್ರೇಮವಾಗಿ ಗೃಹಿಣಿಯರು ತಮ್ಮ ಮನೆ-ಮಠ ಬಿಟ್ಟವರ ಕಥೆಗಳು ಆಗೊಮ್ಮೆ ಈಗೊಮ್ಮೆ ಗಾಳಿಯಲ್ಲಿ ತೇಲಿಬರುತ್ತದೆ. ಆದರೆ ಈ ಸೆಲಫಿ ಸಂಸ್ಕೃತಿ ಎಂಬುದಕ್ಕೆ ತೀವ್ರ ಬಲಿಯಾಗಿರುವವರು ಬಹುಷಃ ಅಂತರ್ಜಾಲ, ಸೋಶಿಯಲ್ ಮೀಡಿಯಾ-ರಹಿತ ಕಾಲವನ್ನೇ ನೋಡದ ಈಗಿನ್ನೂ ೨೫-ವರ್ಷದ ಕೆಳಗಿನವರು.

ಬಾವಿಯೊಳಗಿನ ಕಪ್ಪೆಯೆಂದೇ ನನ್ನನ್ನು ಕರೆಯಿರಿ, ಈ ಸೆಲಫಿ ಸಂಸ್ಕೃತಿಯ ನಿಜವಾದ ವ್ಯಾಪಕತೆ ನನಗೆ ಅರಿವಾದುದ್ದು ಮೊನ್ನೆ ಕಳೆದ ಜನವರಿಯಲ್ಲಿ. ಯಾವುದೊ ಒಂದು ಪ್ರಾಜೆಕ್ಟ್ ಗೆ ಸಂಬಂಧಪಟ್ಟ ಸಂಶೋಧನೆಗೆಂದು ಕೊಡಗಿನ ದುಬಾರೆ ಆನೆ ಕ್ಯಾಂಪ್ ಗೆ ನಾನು, ಒಂದಿಷ್ಟು ಸ್ನೇಹಿತರು ಹೋಗಿದ್ದೆವು. ದುಬಾರೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಈಗ. ನಾವು ಹೋದದ್ದು ವೀಕ್-ಎಂಡ್ ಆಗದಿದ್ದರೂ ಡಜನ್ ಗಟ್ಟಲೆ ಜನ ಬೆಳಗ್ಗೆ ಹತ್ತು ಗಂಟೆಯಷ್ಟರಲ್ಲಿ ಸೇರಿದ್ದರು. ಲೆಕ್ಕ ಮಾಡಿ, ಐದು ಗುಂಪಿನಲ್ಲಿ ಮೂರರ ಕೈಯಲ್ಲಿ ಒಂದು ಸೆಲಫಿ ಸ್ಟಿಕ್. ಅದನ್ನು ಹೀಗೆ-ಹಾಗೆ ಎಂಬಂತೆ ತಿರುಗಿಸಿ-ಮುರುಗಿಸಿ ಬೆಸ್ಟ್ ಆಂಗಲ್ ಹುಡುಕುತ್ತಾ, ಮೀನಿನ ಹಾಗೆ ಮುಖ ಮಾಡಿ ಸೆಲಫಿ ತೆಗೆಯುವವರ ಮಧ್ಯೆ ನಾವು ಅದ್ಯಾವುದೋ ಬೇರೆ ಶತಮಾನದಿಂದ ದಾರಿ ತಪ್ಪಿ ಬಂದವರಂತೆ ಕಾಣುತ್ತಿದ್ದಿರಬೇಕು. ಕೆಲವರಂತೂ ದೋಣಿಯಲ್ಲಿ ಹೋಗುವಾಗಲೇ, ಆನೆಗಳ ಮಧ್ಯೆ ಇರುವಾಗಲೇ ವಾಟ್ಸ್ ಆಪ್ ಮೂಲಕ ಫೋಟೋ ಕಳಿಸುತ್ತಲೇ ಇದ್ದರು, ಫೇಸ್ ಬುಕ್ ನಲ್ಲಿ ಪ್ರೊಫೈಲ್ ಫೋಟೋ ಬದಲಿಸಿಯೂ ಆಯಿತು.

ಮೊನ್ನೆ ಬೆಂಗಳೂರಿನ ರಾಜ ಭವನದ ಹತ್ತಿರ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾಯುತ್ತಿರಬೇಕಾದರೆ ಒಂದೊಂದು ಸೀಸನ್ ನಲ್ಲಿ ಒಂದೊಂದು ವಸ್ತು ಮಾರುವ ಹುಡುಗರು ಸೆಲಫಿ ಸ್ಟಿಕ್ ಮಾರುತ್ತಿರುವುದನ್ನು ನೊಡಿ ಕುತೂಹಲ ತಡೆಯಲಾಗದೆ ನನ್ನೊಟ್ಟಿಗಿದ್ದ ಸ್ನೇಹಿತ ಬೆಲೆ ಎಷ್ಟು ಎಂದು ಕೇಳಿದ. ಪ್ಲಾಸ್ಟಿಕ್ ನಿಂದ ಮಾಡಿದ ಚೀನಾ-ಮೇಡ್ ಸೆಲಫಿ ಸ್ಟಿಕ್ ಅದು. ನಾನೂರು ರೂಪಾಯಿ ಎಂದು ಹೇಳಿದ ಹುಡುಗ ಹತ್ತು ಸೆಕೆಂಡಿನಲ್ಲಿ ಮುನ್ನೂರಕ್ಕೆ ಇಳಿದ. ಕೊಂಡುಕೊಳ್ಳುವ ಆಸಕ್ತಿ ಸುತಾರಾಂ ನಮಗಿರಲಿಲ್ಲ. ನಮ್ಮ ಬೆಲೆ ಅದೆಷ್ಟು ಎಂದು ಒಂದೆರಡು ಸಲ ಕೇಳಿ ಆ ಹುಡುಗ ಪಕ್ಕದ ಕಾರಿನ ಕಿಟಕಿಯೊಳಗೆ ತಲೆ ಒಡ್ಡಿದ. ಸೆಲಫಿ ಸ್ಟಿಕ್ ಒಂದಕ್ಕೆ ಅದಷ್ಟೇ ಬೆಲೆ ಎಂದು ನನಗೆ ಗೊತ್ತಿರಲಿಲ್ಲ. ಸೆಂಡ್ ಆಫ್ ಪಾರ್ಟಿ ಮುಗಿಸಿ ಮಾಲುಗಳಿಗೆ ನುಗ್ಗುವ ಶಾಲೆ ಕಾಲೇಜು ಮಕ್ಕಳ ಕೈಯಲ್ಲೆಲ್ಲ ಇರುವ ಈ ವಿಚಿತ್ರದ ಯಂತ್ರ ನೆನಪಿಗೆ ಬಂತು. ಒಂದು ಕಾಲದಲ್ಲಿ ಕಂಪ್ಯೂಟರ್, ಕಾರು, ಫೋನ್ ಅದೆಲ್ಲವೂ ವಿಚಿತ್ರವೆಂದೆನಿಸಿದ ಯಂತ್ರಗಳೇ...

ಒಂದಾನೊಂದು ಕಾಲದಲ್ಲಿ ಪ್ರವಾಸ ಹೋದಾಗ ಅಕ್ಕ-ಪಕ್ಕದಲ್ಲಿ 'ಒಂದು ಫೋಟೋ ತೆಗಿತೀರ ಪ್ಲೀಸ್' ಎಂದು ಕೇಳಲು ಇಲ್ಲದಿದ್ದಾಗ ಕಷ್ಟ ಪಟ್ಟು ಕ್ಯಾಮೆರಾವನ್ನು ಸೊಟ್ಟ ಹಿಡಿದು ನೆನಪಿಗೆಂದಿರಲಿ ಎಂದು ಫೋಟೋ ತೆಗೆಯುತ್ತಿದ್ದೆವು. ಅದನ್ನು ಸೆಲಫಿ ಎಂದು ಹೆಸರಿಟ್ಟು, ಅದರ ಅದ್ವಾನವಾದಮೇಲೆ ಅಗತ್ಯವೆಂದೆನಿಸಿದರೂ ಈಗ ಹಾಗೆ ಫೋಟೋ ತೆಗೆಯುವ ಮನಸ್ಸು ಬರುವುದಿಲ್ಲ.

ಜಗತ್ತಿನ ಹಲವೆಡೆ ನಡೆಯುತ್ತಿರುವ ಭಯೋತ್ಪಾದನೆಯ ಘಟನೆಗಳ ನಂತರ ಹಲವರು ತಮ್ಮ ಸೆಲಫಿಗಳನ್ನು ಆ ಜಾಗಗಳಲ್ಲಿ ನಿಂತು ತೆಗೆದು, ಫೇಸ್ ಬುಕ್ ನಲ್ಲಿ ಹಾಕುವುದರ ಬಗ್ಗೆ ಮೊನ್ನೆ ಅದೆಲ್ಲೋ ಓದುತ್ತಿದ್ದೆ. ಒಂದು ರೀತಿಯ 'ಟ್ರಾಜಿಡಿ ಟೂರಿಸಂ', ದುರ್ಘಟನೆ ನಡೆದ ಜಾಗಗಳನ್ನು ವ್ಯಭವೀಕರಿಸುವ ಅಭ್ಯಾಸ. ಅವಿವೇಕವೋ, ಸಂವೇದಿತನವೊ ಅಥವಾ ಈಗಿನ ಸಮಾಜವನ್ನು ಪ್ರತಿಬಿಂಬಿಸುವ ಒಂದು ಹೊಸ 'ನಾರ್ಮಲ್' ನಡವಳಿಕೆಯೋ, ಅಥವಾ ಇದೆಲ್ಲವೂ ಮಿಶ್ರಿತವಾದ ಕರ್ಮ ಕಾಂಡವೋ, ಏನೆಂದು ನಾ ಹೆಸರಿಸಲಾರೆ.

No comments: