Tuesday, May 03, 2016

Why Are We Ashamed of Crying?: Binkana Column in Kannada Prabha

I have always been fascinated with rituals of mourning - the songs, the lament, the dances. I admire cultures where it is ok to show grief, unlike so many others where you are told to be strong, not cry, to 'get over it'. There is nothing wrong or unnatural about crying. There is, and shouldn't be, any shame in grieving, openly, freely. 

I wrote about these things, mentioning the Maori dance Haka, Rudalis of Jaisalmer, the Irish Lament and other things, in my Kannada Prabha column this past Sunday.

See below, spelling mistakes, warts and all, because I haven't figured out yet how to copy the edited version from the epaper, on to these pages.

ನ್ಯೂ ಜಿಲ್ಯಾಂಡ್ ನ ಆಲ್ ಬ್ಲಾಕ್ಸ್ ಫುಟ್ ಬಾಲ್/ರಗ್ಬಿ ತಂಡ ತನ್ನ ಪ್ರತಿಯೊಂದು ಆಟದ ಮೊದಲು ಒಂದು ಸಂಪ್ರದಾಯವನ್ನು ಹಮ್ಮಿಕೊಂಡಿದೆ. ಆಟ ಶುರುಮಾಡುವ ಮೊದಲು ಇಡೀ ತಂಡ ಎದುರಾಳಿ ತಂಡದ ಮುಂದೆ ಫೀಲ್ಡ್ ನಲ್ಲಿ ನಿಂತು ಹಕ ನೃತ್ಯವನ್ನು ಮಾಡುತ್ತದೆ. ವಿನಯಶೀಲ ಹೆಜ್ಜೆ ಹಾಕುವ ನೃತ್ಯ ಇದಲ್ಲ. ಹಕ ಎಂಬುದು ನ್ಯೂ ಜಿಲ್ಯಾಂಡ್ ನ ಮಾಒರಿ ಜನಾಂಗದ ಸಾಂಪ್ರದಾಯಿಕ ರಣಘೋಷಣೆಯ ನೃತ್ಯ, ತನ್ನ ಶಕ್ತಿ ಸಾಮರ್ತ್ಯವನ್ನು ಸೂಚಿಸುವಂತಹ ಹಜ್ಜೆ ಹಾಕುವುದರಿಂದ ವಿರೋಧ ಗುಂಪನ್ನು ಹೆದರಿಸುವ ಕಲೆ. ಚೀರಾಟ, ಘರ್ಜನೆಯೊಂದಿಗೆ ಕಾಲನ್ನು ನೆಲಕ್ಕೆ ಅಪ್ಪಳಿಸುವ, ತೊಡೆಗಳಿಗೆ ಕೈಯಿಂದ ಬಡಿಯುವ ಈ ನೃತ್ಯ ಯುಟ್ಯೂಬ್ ವೀಡಿಯೊಗಳಲ್ಲಿಯೂ ಸಹ ದಿಗ್ಬ್ರಮೆಗೊಳಿಸುವಂತವು. ಆಟದ ಮೈದಾನದಲ್ಲಿ ಸಾವಿರಾರು ಜನರ ಎದುರು ನಡೆಯುವ ಹಕ ಒಂದಿಷ್ಟು ಮನೋರಂಜನೆಯೂ ಹೌದು, ಸಂಪ್ರದಾಯದ ಸಂಕೇತವೂ ಹೌದು, ಒಂದಿಷ್ಟು ಮುಂದಿನ ತಂಡವನ್ನು ಬೆದರಿಸುವಂತದ್ದೂ ಹೌದು.

ಇತ್ತೀಚಿಗೆ ಹಕವನ್ನು ಹಲವು ಬೇರೆ ಸಂಧರ್ಭಗಳಲ್ಲಿ ಮಾಡಲಾಗುತ್ತಿದೆ. ಮದುವೆಗಳಲ್ಲಿ, ಅತಿಥಿಗಳನ್ನು ಸ್ವಾಗತಿಸಲೆಂದು, ಸಾಧನೆಗಳನ್ನು ಕೊಂಡಾಡಲು ಮತ್ತು ಸಾವಿನ ಸಂಧರ್ಭಗಳಲ್ಲಿ. ಇತ್ತೀಚಿಗೆ ಆಲ್ ಬ್ಲಾಕ್ಸ್ ನ ಸುಪ್ರಸಿದ್ಧ ಆಟಗಾರ ಜೋನಾ ಲೋಮು ತೀರಿಹೋದಾಗ ಅವನ ಅಂತ್ಯಕ್ರಿಯೆಗೆ ಹಲವು ಗುಂಪುಗಳು ಹಕ ಹೆಜ್ಜೆ ಹಾಕಿದ ವೀಡಿಯೊ ಅಂತರ್ಜಾಲದ ಅವ್ಯವಸ್ಥಯಿಂದ ಎದ್ದು ನಿಂತು ಅದೆಷ್ಟೋ ಮುಖ್ಯ ಪತ್ರಿಕೆ, ಟೀವಿ ನ್ಯೂಸ್ ಗಳಲ್ಲಿ ಸುದ್ಧಿಯಾಯಿತು. ಈ ಹಕಗಳ ವೀಡಿಯೊ ನೋಡುವಾಗ ಕಣ್ಣೀರು ಹರಿಯದಿರಲು ಬಲು ಕಷ್ಟ. ಅತಿಯಾದ ಶೋಖದ ಮಧ್ಯೆ ಸಂಪೂರ್ಣ ಏಕಾಗ್ರ ದೃಷ್ಟಿ, ಮನಸ್ಸಿನಿಂದ ಲೋಮುವಿನ ಟೀಂಮೇಟ್ ಗಳು, ಗೆಳೆಯರು, ಜನಾಂಗದವರು ಹಕ ಮಾಡುತ್ತಾರೆ. ಅವನ ಹೆಂಡತಿ ಅವರ ಇಬ್ಬರು ಸಣ್ಣ ಗಂಡು ಮಕ್ಕಳ ಕೈಗಳ್ಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮೈದಾನದ ಮಧ್ಯಕ್ಕೆ ಲೋಮುವಿನ ಶವಪೆಟ್ಟಿಗೆಯನ್ನು ಹೊತ್ತ ಗುಂಪಿನ ಜೊತೆಗೆ ಬರುತ್ತಾಳೆ. ಈ ಎಲ್ಲಾ ಗುಂಪುಗಳ ಹಕ ಮುಗಿಯುತ್ತಿರಬೇಕಾದರೆ ಕಣ್ಣೀರು ಸುರಿದು ಬರುತ್ತದೆ. ಈ ಹಕದ ಉದ್ದೇಶವೇ ಅದು.

ಶೋಖಾಚರಣೆ ಒಂದು ಕಲೆ, ಅದನ್ನು ತೋಳು ಬಿಚ್ಚಿ ಸಂಪೂರ್ಣವಾಗಿ ಸ್ವೀಕರಿಸುವ, ಅಪ್ಪಿಕೊಳ್ಳುವ ಸಂಪ್ರದಾಯವಿರುವ ಸಮಾಜ, ಜನಾಂಗ ವಿಕಾಸಗೊಂಡ ಸಮಾಜ ಎಂದು ನನಗನಿಸುತ್ತದೆ. ಸಂತೋಷವನ್ನು ವ್ಯಕ್ತಪಡಿಸುವ, ಸಾಧನೆಗಳನ್ನು ಆಚರಿಸುವ ಹಾಡುಗಳು, ನೃತ್ಯ, ಸಾಹಿತ್ಯ, ಸಂಗೀತ ಸರ್ವೇಸಾಮಾನ್ಯವಾದುದ್ದು, ಎಲ್ಲಾ ಸಾಂಪ್ರದಾಯಿಕ, ಆಧುನಿಕ ಸಮಾಜದಲ್ಲಿ ಕಂಡುಬರುವಂತದ್ದು. ಅದೇ ದುಃಖವನ್ನು ಸಹ ಕೊಂಡಾಡುವ ವಿಷಯ ಬಂದಾಗ ನಮಲ್ಲಿ ಹೆಚ್ಚಿನವರು ಹಿಂಜರಿಯುತ್ತೇವೆ. ವಯ್ಯಕ್ತಿಕವಾಗಿ ಅಲ್ಲದಿದ್ದರೂ ಒಂದು ಜನಾಂಗವಾಗಿ, ಒಂದು ಸಮಾಜವಾಗಿ ಶೋಖವನ್ನು ಭೌತಿಕವಲಯದಲ್ಲಿ ತಂದಿಟ್ಟು ಕಣ್ಣೀರಿನ ಮೂಲಕ, ಚೀರಾಟದ ಮೂಲಕ ಅಥವಾ ಬೇರೆಯಾವುದೋ ರೀತಿಯಲ್ಲಿ ಹೊರಹಾಕುವುದನ್ನು ಪ್ರೋತ್ಸಾಹಿಸಲಾಗುವುದಿಲ್ಲ. ಸಂಸ್ಮರಣೆ, ಶೋಖಾಚರಣೆಗೆಂದು ಕಟ್ಟುವ ಪೂಜೆ ಪುನಸ್ಕಾರ, ಮಂತ್ರ, ಹೋಮ, ಪ್ರಾರ್ಥನೆ ಅದೆಷ್ಟೋ ಎಲ್ಲಾ ಧರ್ಮಗಳಲ್ಲಿಇದ್ದರೂ ಕಣ್ಣೀರು ಸುರಿಸುವವರು ನಿಶ್ಶಕ್ತರೆಂದು ಭಾವಿಸುವ ಕಲ್ಪನೆಯನ್ನು ಎಲ್ಲೆಂದರಲ್ಲಿ ಕಾಣಬಹುದು.

ಅಳಬೇಡ, ತಂಗಿ ಅಳಬೇಡ ಎಂಬ ಮಾತು ದೃಡ ನಂಬಿಕೆಯಂತೆ ಪಸರಿಸಿರುವ ಸಮಾಜಗಳು ಒಂದೆಡೆಯಾದರೆ ಇನ್ನೊಂದೆಡೆ ಕಣ್ಣೀರನ್ನು ಪ್ರೋತ್ಸಾಹಿಸುವ ಸಂಗೀತ ಹಲವೆಡೆ ಕಂಡುಬರುತ್ತದೆ. ಭಾರತದಲ್ಲಿ ರುದಾಲಿಗಳ ವೃತ್ತಿಯೇ ಅದು. ರಾಜಸ್ಥಾನದ ಮರುಭೂಮಿಯ ನಿವಾಸಿಗಳಾದ ಇವರು ಸಾವಿನ ಮನೆಯಲ್ಲಿ ಬಂದು ತಮ್ಮ ಕಣ್ಣೀರಿನಿಂದ ಶೋಕಾಚರಣೆ ಮಾಡುತ್ತಾರೆ. ಹಲವು ರಾಜ್ಯಗಳಲ್ಲಿ ಉಲುಲು ಎಂಬ ಭಿನ್ನ ರೀತಿಯ ಚೀಕಾರ ಸಾವನ್ನು ಸಂಖೇತಿಸುತ್ತದೆ. ಅರಬ್ ಸಂಸ್ಕೃತಿಯಲೂ ಇದು ಕಂಡುಬರುತ್ತದೆ. ಅತಿಯಾದ ಶೋಖ ಉಂಟಾದಾಗ ಕರುಳು ಕುಕ್ಕಿಸುವಂತಹಾ ಕೂಗು ಹೊರಹೊಮ್ಮುತ್ತದೆ.

ಇನ್ನು ಪಶ್ಚಿಮ ಜಗತ್ತಿನತ್ತ ನೋಡಿದರೆ ಹಲವು ಜನಪದ ಸಾಹಿತ್ಯ, ಸಂಗೀತದಲ್ಲಿ ಶೊಖಾಚರಣೆಯ ಗುರುತುಗಳು ಕಂಡುಬರುತ್ತವೆ. ಐಯರ್ ಲ್ಯಾಂಡ್ ನ ಲ್ಯಾಮೆಂಟ್ ಎಂಬುವ ಸಂಗೀತ ಒಂದು ಉದಾಹರಣೆಯಷ್ಟೇ. ಈ ಸ್ಕಾಟಿಷ್ ಪೈಪ್ ಗಳನ್ನು ಬಳಸುವ ಕರೆ, ಯಾವುದನ್ನೋ, ಯಾರನ್ನೋ ಕಳೆದುಕೊಂಡ ದೊಡ್ಡದೊಂದು ದುಃಖ ಮನಸ್ಸಿನಲ್ಲಿಟ್ಟುಕೊಂಡ ಭಾರ, ಜಡತೆ, ಶೂನ್ಯದಲ್ಲಿ ಲ್ಯಾಮೆಂಟ್ ಒಂದನ್ನು ಕೇಳುವಾಗ ಬಿಕ್ಕಿ ಬಿಕ್ಕಿ ಅಳು ಬರುತ್ತದೆ. ಕತ್ತಲೆ ಕೋಣೆಯ ಮೂಲೆಯಲ್ಲಿ ಮುದುಡಿ ಮಲಗಿ ಹೃದಯ ಹಿಂಡಿ ಹಿಪ್ಪೆಯಾಗುವಂತೆ ನಿಶಬ್ಧವಾಗಿ ಕಿರಿಚುವಂತಾಗುತ್ತದೆ. ಇಂತಹಾ ಪ್ರತಿಕ್ರಿಯೆಯನ್ನು ಪ್ರೋತ್ಸಾಹಿಸುವ ಉದ್ದೇಶವೇ ಇಂತಹಾ ಸಾಹಿತ್ಯ, ಸಂಗೀತಕ್ಕೆ ಇರುವಂತದ್ದು.

ಅಮೇರಿಕಾದ 'ಓ ಶೆನನ್ ಡೋಅ' ಹಾಡು, ಚೆಲ್ಟಿಕ್ ಸಂಗೀತ, ಹೀಗೆ ಹಲವು ಪುರಾತನ ನಾಗರಿಕತೆಗಳಲ್ಲಿ ಇಂತಹಾ ಶೋಖಾಚರಣೆ ಕಂಡುಬರುತ್ತದೆ. ಕಣ್ಣು ಮುಚ್ಚಿಕೊಂಡು ಈ ಹಾಡು, ಸಂಗೀತವನ್ನು ಕೇಳುತ್ತಾ ಇದ್ಧಂತೆ ಕಣ್ಣೀರಿನೊಂದಿಗೆ ಹೃದಯ ಒಂದಿಷ್ಟು ಹಗುರವಾಗುತ್ತದೆ. ದುಃಖ ಇಷ್ಟರಲ್ಲಿ ಕಡಿಮೆಯಾಗಿಬಿಡುವುದೆಂಬ ನಂಬಿಕೆಯ ಅಡಿಪಾಯ ಇಲ್ಲಿ ಖಂಡಿತ ಇರುವುದಿಲ್ಲ. ಭಾವನೆಗಳನ್ನು ಹಿಡಿದಿಟ್ಟುಕೊಳ್ಳದೆ ಅವುಗಳನ್ನು ಸಂಪೂರ್ಣವಾಗಿ ಅನುಭವಿಸುವುದು ಆರೋಗ್ಯಕ್ಕೆ ಒಳ್ಳೇದು ಎಂದು ಯೋಗದ ಜೊತೆಗೆ ಹಲವು ಪರ್ಯಾಯ ಔಷದ ಪದ್ಧತಿಗಳು ಸಾರುತ್ತವೆ.

ಇಂತಹಾ ಸಾಂಸ್ಕೃತಿಕ ಪದ್ದತಿಗಳನ್ನು ವಿಮರ್ಶಿಸಲು ಹೋಗದೆ ಇದ್ದರೂ ಲ್ಯಾಮೆಂಟ್, ಶೋಖ ಗೀತೆಗಳ ಶಕ್ತಿಯನ್ನು ಗುರುತಿಸಲೇಬೇಕು. ಇಂಗ್ಲಿಷ್ ಭಾಷೆಯ ಮೌರ್ನಿಂಗ್ ಎಂಬ ಪದಕ್ಕೆ ಅಚ್ಚುಕಟ್ಟಾಗಿ ಹೋಲುವ ಕನ್ನಡ ಸಮಾಂತರ ಪದವಿಲ್ಲ. ಶೋಖಾಚರಣೆ ಹತ್ತಿರ ಬಂದರೂ ಅದರ ಅರ್ಥದಲ್ಲಿ ಒಂದು ಸಂಧರ್ಭಕ್ಕೆ ಸೀಮಿತವಾಗುತ್ತದೆ. ಕಳೆದುಹೋದದ್ದನ್ನು ಸ್ಮರಿಸಿ ದುಃಖಪಡುವ ಭಾವನೆಗೆ ಸರಿಯಾದ ಪದ ಬಳಕೆಯಲ್ಲಿಲ್ಲ. ಈ ಸಂಸ್ಮರಣೆ ನೆಗೆಟಿವ್ ಆಗಿರಬೇಕಿಲ್ಲ. ಇಂತಹಾ ಸಂಸ್ಮರಣೆಯ ಪದ್ದತಿ ಇಲ್ಲದ ಸಂಸೃತಿಯಲ್ಲಿ ಅದಕ್ಕೆ ಪದವಾದರೂ ಎಲ್ಲಿಂದ ಬರುತ್ತದೆ?

ಧೀರ್ಘಕಾಲದ ಸ್ಮರಣೆಯ ಬಗ್ಗೆ ಹಿಂಜರಿಕೆ ಏಕೆ? ಒಮ್ಮೊಮ್ಮೆ ಸುರಿಯುವ ಕಣ್ಣೀರಿಗೆ ಹೆದರುವುದೇಕೆ? ಕತ್ತು ಹಿಂದೆ ಹಾಕಿ ತಲೆ ಆಕಾಶಕ್ಕೆ ಒಡ್ಡಿ ನಗುವ ನಗುವಿನಂತೆ ಇದು ಒಂದು ಭಾವನೆಯ ಬಿದುಗಡೆಯಷ್ಟೇ. ಸಭ್ಯ ಸಮಾಜದಲ್ಲಿ ದುಃಖವನ್ನು ಕಪ್ಪು ಪರದೆಯ ಹಿಂದೆ ಮುಚ್ಚಿಡುವುದು ಶೌರ್ಯ, ಶಕ್ತಿಯ ಸಂಖೇತವೆಂದು ತೀರ್ಮಾನಿಸಿದವರಾರು?

No comments: