Sunday, October 09, 2016

On Brexit and Myths: Binkana Column in Kannada Prabha

Published in Kannada Prabha on August 28, 2016


ಇವತ್ತಿಗೆ ಸರಿಯಾಗಿ ಎರಡು ತಿಂಗಳುಗಳಾದವು, ಈ ಲಂಡನ್ ಮಹಾನಗರಕ್ಕೆ ಬಂದು. ಅದೆಷ್ಟೋ ಹೊಸ ಜನರ ಪರಿಚಯ, ಹೊಸ ಸದ್ದು, ಹೊಸ ದೃಷ್ಟಿಕೋನ, ಹೊಸ ಸಂಪ್ರದಾಯಗಳು, ಎಲ್ಲವೂ ಹೊಸತೆಂದು ಅನಿಸುತ್ತ ಅನಿಸುತ್ತ, ಹೊಸತೆಲ್ಲ ಅಲ್ಪ ಮಟ್ಟಿಗೆ ಪರಿಚಿತ ಎನ್ನುವಷ್ಟಾಗಿದೆ. ವಿಷ್ಮಯ ನೋಟ ಸ್ವಲ್ಪ ಮಾಸಿ, ಇದೀಗ ಹಲವು ಬಾರಿ ನಡೆದ ರಸ್ತೆಗಳು, ನೋಡಿಯೂ ನೋಡದಂತೆ ಅನಿಸುವ ಕಟ್ಟಡಗಳ ಸಂಖ್ಯೆ ಏರುತ್ತಲಿದೆ. ಟ್ಯೂಬ್ ಸ್ಟೇಷನ್ ಗಳನ್ನು ದಾಟುವಾಗ ಎಲ್ಲೆಂದರಲ್ಲಿ ಬರುವ ಟೂರಿಸ್ಟ್ ಗಳ ಮೇಲೆ ಒಂದೊಂದು ಸಾರಿ ರೇಗುವಂತಾಗುತ್ತದೆ - ಅದೆಷ್ಟು ಬೇಗ ನಗರಗಳನ್ನು, ವಸ್ತುಗಳನ್ನು, ಜನರನ್ನು ನಮ್ಮದಾಗಿಸಿಕೊಳ್ಳುವ ಆತುರ ಎಂದೆನಿಸುತ್ತದೆ.

ಸಂಭಾಷಣೆ ಒಂದೆರಡು ನಿಮಿಷ ಕಳೆದು, ಎಲ್ಲಿಂದ, ಏನು ಕೆಲಸ, ಅವತ್ತಿನ ಹವಾಮಾನ (ಹವಾಮಾನದ ಚರ್ಚೆ ಇಂಗ್ಲೆಂಡ್ ನವರಿಗೆ ಮಾತನಾಡಿ ಮುಗಿಯದ ವಿಷಯ, ನಮ್ಮ ಬೆಂಗಳೂರಿನವರಿಗೆ ಆಟೋ ಡ್ರೈವರುಗಳ ಕಿರುಕುಳ, ಸಿಲ್ಕ್ ಬೋರ್ಡ್ ಜಂಕ್ಷನಿನ ಟ್ರಾಫಿಕ್ ವಿಷಯ ಇದ್ದಂತೆ) ಇತ್ಯಾದಿ ಮುಗಿದ ನಂತರ ಬ್ರೆಕ್ಸಿಟ್ ವಿಷಯಕ್ಕೆ ಬಂದೇಬಿಡುತ್ತದೆ. ಎರಡು ತಿಂಗಳುಗಳ ಹಿಂದೆ ಬ್ರಿಟನ್ ಅವಿವೇಕ ರಾಜಕೀಯ ನಿರ್ಧಾರದಿಂದಾಗಿ ಯುರೋಪಿಯನ್ ಯೂನಿಯನ್ (ಈ.ಯು.) ನಿಂದ ಹೊರಬರಬೇಕೆಂಬ ಜನಾಭಿಪ್ರಾಯ ಹೊರಬಂದಿತ್ತು. ಈ ಜನಾಭಿಪ್ರಾಯ ನಿಜವಾಗಿಯೂ ಈ ರೀತಿ ತಿರುಗಬಹುದು ಎಂದು ಬೆಂಬಲಿಸಿದ ರಾಜಕಾರಣಿಗಳಾಗಲಿ, ಮತ ಚಲಾಯಿಸಿದ ಜನರಾಗಲಿ ನಿರೀಕ್ಷಿಸಿರಲಿಲ್ಲ. ಆ ಒಂದು ತೀರ್ಪು ಸಿರಿಯಾ, ಇರಾಕ್ ಇತ್ಯಾದಿ ದೇಶಗಳಿಂದ ವಲಸೆ ಬರುವವರ ವಿರುದ್ಧ, ಏರುತ್ತಿರುವ ಬೆಲೆ, ಕುಸಿಯುತ್ತಿರುವ ಕೆಲಸದ ಮಾರುಕಟ್ಟೆಯ ವಿರುದ್ಧ ಜನರ ಅಭಿಪ್ರಾಯ, ರಾಜಕಾರಣಿಗಳ ವಿರುದ್ಧ ಪ್ರತಿಭಟನೆಯಾಗಿತ್ತು. ವರುಶಾನುಗಟ್ಟಲೆಯಿಂದ ಕೇಳದ ಕೂಗು ಈ ಒಂದು ನಿರ್ಧಾರದ ರೂಪದಲ್ಲಿ ಚೀರುವ ಸ್ವರದಲ್ಲಿ ಪ್ರತಿಧ್ವನಿಸಿತು. ಈ.ಯು. ವಿನ ಪರ ಆಗಲಿ, ವಿರುದ್ಧವಾಗಲಿ ಇದು ಇರಲಿಲ್ಲವಂತೆ. ಎಷ್ಟರ ಮಟ್ಟಿಗೆ ಇದು ಈ.ಯು.ವಿನ ವಿಷಯವೇ ಆಗಿರಲಿಲ್ಲವೆಂದರೆ ತೀರ್ಪು ಘೋಷಿಸಿದ ಮುಂದಿನ ದಿನ ಗೂಗಲ್ ನಲಿ ಅತಿ ಹೆಚ್ಚು ಹುಡುಕಲಾದ ವಿಷಯ 'ಈ.ಯು. ಎಂದರೇನು?', 'ಈ.ಯು.ವಿನಿಂದ ಹೊರಗೆ ಹೋದರೆ ಅದರ ಪರಿಣಾಮವೇನು?' ಆಗಿತ್ತಂತೆ.

ಬ್ರೆಕ್ಸಿಟ್ ನಿಂದ ಏನಾಗಬಹುದು ಎಂಬುದು ಇನ್ನು ಯಾರಿಗೂ ಗೊತ್ತಿಲ್ಲ. ನಾನು ಭೇಟಿ ಮಾಡುತ್ತಿರುವ ಹೆಚ್ಚಿನವರು ಈ ದುರ್ಘಟನೆ ನಡೆಯಲೇ ಇಲ್ಲವೆಂದು ನಟಿಸುತ್ತಿದ್ದಾರೆ. ಅಥವಾ ಪೂರ್ತಿ ನಿರಾಕಾರ. ಎರಡು ತಿಂಗಳಲ್ಲಿ ಒಂದು ಇಂಚು ಸಹ ಮುಂದುವರಿಯದ್ದಿದಾಗ ಇನ್ನು ಮುಂದೆಯೂ ಏನೂ ಆಗದಿರಬಹುದು ಎಂಬ ನಂಬಿಕೆ. ಇಲ್ಲಿ ಬ್ರೆಕ್ಸಿಟ್, ಬ್ರಿಟನ್ ನ ರಾಜಕೀಯ, ಈ.ಯು. ಇತ್ಯಾದಿ ಭಾರತಕ್ಕೆ ಪರಿಣಾಮ ಬೀರಬೇಕಾದರೆ ನಾವೂ ಸಹ ಕಾದು ನೋಡಬೇಕಷ್ಟೆ. ಪೌಂಡಿನ ಬೆಲೆ ಅದಾಗಲೇ ಕುಸಿದಿದೆ, ಪ್ರವಾಸಿಗರಿಗೆ ಒಳ್ಳೆದಾದರೂ, ಇಲ್ಲಿ ಕೆಲಸ ಮಾಡಿ ಭಾರತಕ್ಕೆ ಹಣ ಕಳಿಸುವ ಅದೆಷ್ಟೋ ಸಾವಿರ ಲಕ್ಷ ಭಾರತೀಯರಿಗೆ ಕೆಟ್ಟ ಸುದ್ಧಿಯಾಗಿ ಉಳಿದಿದೆ. ಬ್ರೆಕ್ಸಿಟ್ ನ ವಿಷಯ ಅದೆಷ್ಟೇ ಈ ದ್ವೀಪದ ಆಂತರಿಕ ರಾಜಕೀಯ ವಿಷಯವಾದರೂ ಭಾರತಕ್ಕೆ, ಉಳಿದ ದೇಶಗಳಿಗೆ ಪರಿಣಾಮ ಬೀರದೆ ಇರಲು ಅಸಾಧ್ಯ.

ಯಾವ ಮನುಷ್ಯನೂ ಒಬ್ಬ ದ್ವೀಪವಲ್ಲ/ ತನ್ನಲ್ಲೇ ಸಂಪೂರ್ಣ/ ಪ್ರತಿಯೊಬ್ಬ ಮನುಷ್ಯನೂ ಖಂಡದ ಒಂದು ಭಾಗ/ಇಡಿಯ ಒಂದು ಭಾಗ ಎಂದು ಆಂಗ್ಲ ಕವಿ ಜಾನ್ ಡೋನ್ ಹದಿನೇಳನೇ ಶತಮಾನದಲ್ಲಿ ಬರೆದ್ದಿದ್ದ. ಒಂದು ದ್ವೀಪ ಬರಿಯ ಒಂದು ದ್ವೀಪವಲ್ಲ.

ಆ ಗೂಗಲ್ ವಿಷಯ ಕೇಳಿದೊಡನೆ ನನಗೆ ಅಚ್ಚರಿ ಮೂಡಿಸಿದ್ದು ಒಂದೇ ಒಂದು ವಿಷಯ, ಜನರು ಈಗಿನ ಜಾಗತೀಕರಣ, ಬಂಡವಾಳಶಾಹಿ ಜಗತ್ತಿನಲ್ಲಿ ಅಷ್ಟು ಮೂರ್ಖರೇ ಎಂಬುದು. ಆದರೆ ಒಂದು ನಿಮಿಷ ನಿಂತು ಯೋಚಿಸಿದರೆ ಇದರಲ್ಲಿ ಅಷ್ಟು ಹುಬ್ಬೇರಿಸುವ ವಿಷಯ ಹೆಚ್ಛೇನಿಲ್ಲ. ಮಾಹಿತಿ ಎಂಬ ವಸ್ತು ಹಲವು ರೀತಿಯಲ್ಲಿ ಮಾರಾಟವಾಗುವ ಈ ಜಗತ್ತಿನಲ್ಲಿ ರಾಜಕೀಯ ಐಡಿಯಾಗಳು ಸಹ ಮಾರಾಟವಾಗುತ್ತವೆ, ಒಂದು ಮಿಥ್ ಅಥವಾ ಪುರಾಣದ ರೂಪದಲ್ಲಿ. ಬ್ರೆಕ್ಸಿಟ್ ಸಂಧರ್ಭದಲ್ಲಿ ಇದು ಬ್ರಿಟನ್ ಮತ್ತೆ 'ಗ್ರೇಟ್' ಆಗಬೇಕಾದರೆ ಈ.ಯು.ವಿನಿಂದ ಹೊರಬರಬೇಕು ಎಂಬ ಸಂದೇಶ ಹೊರಡಿಸಲಾಗಿತ್ತು. ಅಮೆರಿಕಾದ ಕಡೆ ಗಮನ ಹರಿಸಿದರೆ ರಾಷ್ಟ್ರಪತಿ ಆಗಿಯೇಬಿಡುವನೋ ಎಂಬಂತಿರುವ ಡೊನಾಲ್ಡ್ ಟ್ರಂಪ್ ಅಮೆರಿಕಾವನ್ನು 'ಗ್ರೇಟ್' ಮಾಡುತ್ತೇನೆ ಎಂಬ ಘೋಷಣೆಯನ್ನು ಮಾಡಿದ್ದಾನೆ. ಇಂತಹಾ ಪುರಾಣಗಳು ಜಾಹೀರಾತು ಮತ್ತು ಭಯಾನಕ ಪ್ರೊಪಗಾಂಡಾ ದ ಮಧ್ಯೆ ನಿಲ್ಲುತ್ತದೆ. ಅವೆರಡು ನೇರವಾಗಿ, ಖಡಕ್ ಆಗಿ ತಮ್ಮ ಸಂದೇಶವನ್ನು ಹೇಳುವುದಾದರೆ, ಇಂತಹಾ ಕಟ್ಟು ಕಥೆಗಳು, ಒಂದು ವಸ್ತು, ವ್ಯಕ್ತಿ ಅಥವಾ ಐಡಿಯಾವನ್ನು ಮಾರಲು ಉಪಯೋಗಿಸುವ ಪುರಾಣಗಳು ಅತೀ ಸೂಕ್ಷ್ಮವಾಗಿ ಜನರ ತಲೆಯನ್ನು ಹೊಕ್ಕುತ್ತದೆ. ಅಲ್ಲೇ ಅಪಾಯ. ಆಯ್ಕೆಯ ಹಕ್ಕು ಇರುತ್ತದೆ ಎಂದು ಜನರನ್ನು ನಂಬಿಸಿದರೂ ಒಂದು ಹಂತದವರೆಗೆ ಮಾತ್ರ ಆ ಆಯ್ಕೆಯನ್ನು ಮಾಡಬಹುದಷ್ಟೆ. ಅದೆಲ್ಲೋ ಒಂದು ವಷ್ಟುವನ್ನು ಕೊಂಡುಕೊಳ್ಳುವುದರ ಬದಲು ಅದರ ಹಿಂದೆ ಇರುವ (ಕಟ್ಟು) ಕಥೆಯನ್ನು ಕೊಂಡುಕೊಳ್ಳಲು ಶುರುಮಾಡುತ್ತೇವೆ.

ಸಾವಯವ ತರಕಾರಿ ದೇಹಕ್ಕೆ ಒಳ್ಳೇದು, ನಿಜ. ಆದರೆ ಅದೇ ಸಾವಯವ ತರಕಾರಿ ಜಗತ್ತಿನ ಇನ್ನೊಂದು ಮೂಲೆಯಿಂದ ಬಂದಿದ್ದರೆ ಅದಕ್ಕೆ ಸೇರಿರುವ ಕಾರ್ಬನ್ ಫುಟ್ ಪ್ರಿಂಟ್ ಅಥವಾ ಅಲ್ಲಿಂದ ಇಲ್ಲಿಗೆ ತರಲು ಉಪಯೋಗಿಸಿದ ಶಕ್ತಿ ಭೂಮಿಗೆ ಭಾರವನ್ನು ಹೆಚ್ಚಿಸುತ್ತದೆ. ಆಗ ನಾವು ಕೊಂಡುಕೊಳ್ಳುತ್ತಿರುವುದು ಒಳ್ಳೇದೇ ಅಥವಾ...? ನವಉದಾರವಾದ ಆರ್ಥಿಕ ನೀತಿ ಇಪ್ಪತೈದು ವರ್ಷಗಳ ಹಿಂದೆ ಭಾರತದಲ್ಲಿ ಪರಿಚಯಿಸಿದಾಗ ಅದೊಂದು ಯುಟೋಪಿಯ, ಒಂದು ಸ್ವರ್ಗವನ್ನು ಕಲ್ಪಿಸುತ್ತದೆ ಎಂದು ಹೇಳಿ ಮಾರಲಾಗಿತ್ತು. ಇದೀಗ ಜಗತ್ತಿನೆಲ್ಲೆಡೆ ಈ ಉದಾರವಾದ ನೀತಿ ಎಲ್ಲದಕ್ಕೂ ಉತ್ತರವಲ್ಲ ಎಂದು ಆರ್ಥಿಕ ಶಾಸ್ತ್ರಜ್ಯ್ನಾರು ಒಪ್ಪಿಕೊಳ್ಳುತ್ತಿದ್ದಾರೆ.

ಹೊಳೆಯುವುದೆಲ್ಲಾ ಚಿನ್ನವಲ್ಲ. ಕೇಳಿದ್ದೆಲ್ಲ ಸತ್ಯವಲ್ಲ. ಪುರಾಣಗಳಂತೂ ಒಳ್ಳೆ ಅಜ್ಜಿ ಹೇಳುವ ಕಥೆಗಳಾಗಿ ಒಳ್ಳೇದೇ ಹೊರತು ಕಡು ಸತ್ಯವಲ್ಲ. 'ವಿಥ್ ಎ ಪಿಂಚ್ ಆಫ್ ಸಾಲ್ಟ್' ಎಂಬ ಗಾದೆಯಂತೆ ಈಗಿನ ರಾಜನೀತಿಯನ್ನು ಒಂದು ಚಿಟಿಕೆ ಉಪ್ಪಿನ ಜೊತೆ ತಿನ್ನಬೇಕು - ಇದ್ದದನ್ನು ಇದ್ದಹಾಗೆ ನಂಬದೆ. ಇಂತಹಾ ಪುರಾಣಗಳು ಎಲ್ಲೆಂದೆರಲ್ಲಿ ಇರುವಾಗ, ಸತ್ಯ-ಸುಳ್ಳು, ಅರೆ ಸತ್ಯ - ಅರೆ ಸುಳ್ಳುಗಳ ಮಧ್ಯೆ ಇರುವ ಗೆರೆಗಳು ಮಾಸಿ ಒಂದಾಗುತ್ತಿರುವಾಗ ಪರಿಹಾರವೇನು ಎಂಬುದು ನಾನರಿಯೆ. ಪ್ರಶ್ನೆಗಳು ಒಂದಾದ ಮೇಲೆ ಒಂದು ಮೂಡುತ್ತವೆ. ಬಿಡುವಂತಿಲ್ಲ, ಪರಿಣಾಮದಿಂದ ರಕ್ಷಿಸಿಕೊಳ್ಳುವಂತಿಲ್ಲ. ಯಾರೊಬ್ಬನೂ ಒಂದು ದ್ವೀಪವಲ್ಲ.

No comments: