Tuesday, December 27, 2016

The Lost Art of Sending Greeting Cards: In Binkana Column, Kannada Prabha

I am sending a few greeting cards this year, belatedly. Adding in this and that into the envelopes, personalising the crap out of them. Some of you will get one!

This column might well be my last in KP (more on that later). I wrote on greeting cards and ended by wishing people a happy new year. It was published on Christmas Day. Unedited version below.

Also, Happy New Year, dear people.

ನನ್ನದು ಸ್ವಲ್ಪ ಲಾಸ್ಟ ಮಿನಿಟ್ ಕೆಲಸ ಜಾಸ್ತಿ. ಈ ಅಂಕಣ ಕೂಡ ಪತ್ರಿಕೆಯ ಸಂಪಾದಕರಿಗೆ ಲಾಸ್ಟ ಮಿನಿಟ್ ನಲ್ಲಿ ತಲುಪಿರುತ್ತದೆ, ಅವರನ್ನು ಕೇಳಿದರೆ ಗೊಣಗುತ್ತಾ ಹೇಳಿಯಾರು. ಪರೀಕ್ಷೆಗೆ ಓದುತ್ತಿದ್ದುದು, ಟಿಕೆಟ್ ಗಳನ್ನು ಬುಕ್ ಮಾಡುವುದು, ಅದ್ಯಾವುದೋ ಅಪ್ಲಿಕೇಶನ್ ಕಳಿಸುವುದು, ಕರೆಂಟ್ ಬಿಲ್ ಕಟ್ಟುವುದು, ಎಲ್ಲವೂ ಸ್ವಲ್ಪ ಲಾಸ್ಟ ಮಿನಿಟ್ ನಲ್ಲೆ ನಡೆಯುತ್ತಾ ಬರುತ್ತಿರುವ ಚಾಳಿ. ಇದೊಂದು ಒಳ್ಳೆಯ ಅಭ್ಯಾಸವೆಂದು ಖಂಡಿತವಾಗಿಯೂ ಹೆಮ್ಮೆಯಿಂದ ಹೇಳಿಕೊಳ್ಳುವ ದುರಹಂಕಾರ ನನ್ನದಲ್ಲ. ದಶಕಗಳ ಅಭ್ಯಾಸ, ಟಕ್ಕ್ ಎಂದು ಕೋಲು ತಿರುಗಿಸಿ ಬದಲಾಯಿಸುವುದು ಕಷ್ಟ. ಬದಲಿಸುವ ಪ್ರಯತ್ನ ದಶಕಗಳಿಂದ ನಡೆದುಬರುತ್ತಲಿದೆ ಎಂಬುದು ನೀವು ಊಹಿಸಿಕೊಂಡಿರುತ್ತೀರಿ.

ನಿನ್ನೆ ಇದೇ ಇನ್ನೊಂದು ಲಾಸ್ಟ ಮಿನಿಟ್ ಕೆಲಸದ ಹಿಂದೆ ಓಡಿದ ಬಗ್ಗೆ ನಿಮಗೆ ಹೇಳಬೇಕು. ಅದೆಲ್ಲಿಂದ ಬಂದ ಯೋಚನೆಯೋ ನಾ ಹೇಳಲಾರೆ. ಏನೋ ಓದುತ್ತಿರಬೇಕಾದರೆ ತಲೆಗೆ ಹೊಳೆದಿರಬೇಕು - ಇಂತಹಾ ಯೋಚನೆಗಳು ಬರುವ ಸಮಯ ಸಾಮಾನ್ಯ ರಾತ್ರಿ, ಇನ್ನೇನು ಮಲುಗಬೇಕು ಎನ್ನುವಷ್ಟರಲ್ಲಿ, ತಲೆಗೆ ಹುಳ ಬಿಟ್ಟಂತಾಗಿ, ಮತ್ತೆ ಎಚ್ಚರಗೊಂಡು ಪ್ಲಾನ್ ಮಾಡುತ್ತಾ ನಿದ್ರೆ ಕೆಡುವ ಹೊತ್ತು. ಇನ್ನೇನು ಈ ವರ್ಷದ ಕೊನೇಯ ವಾರವಿದು, ಒಂದಿಷ್ಟು ಸ್ನೇಹಿತರಿಗೆ ಗ್ರೀಟಿಂಗ್ ಕಾರ್ಡ್ಸ್, ಶುಭಾಷಯ ಪತ್ರಗಳನ್ನು ಯಾಕೆ ಕಳಿಸಬಾರದು ಎಂದು ನೆನಪಾಯಿತು. ತಕೊ, ಮಗುವಿನ ಕೈಗೆ ಹೊಸ ಆಟಿಕೆಯನ್ನು ಕೊಟ್ಟಷ್ಟು ಉತ್ಸಾಹದಲ್ಲಿ ಬೆಳಗಾಗಲು ಕಾದು, ಅಷ್ಟರಲ್ಲಿಯೂ ತಡೆಯಲಾಗದೆ ನನ್ನ ಪೇಟೆಯ ಮಧ್ಯೆ ಇರುವ ಈ ಹಳ್ಳಿಯಲ್ಲಿ ಪಕ್ಕದಲ್ಲೇ ಇರುವ ಫ್ರೆಂಡಿಗೆ ಫೋನ್ ತೆಗೆದು ಮೆಸೇಜ್ ಕಳಿಸಿ ಗ್ರೀಟಿಂಗ್ ಕಾರ್ಡ್ಸ್ ಎಲ್ಲಿ ಸಿಗುತ್ತದೆ ಎಂದು ಗೊತ್ತ ಎಂದು ಕೇಳಿದೆ. ಅವನಿಗೆ ಗೊತಿರಲಿಲ್ಲ. ಅದೆಲ್ಲ ನಮ್ಮ ಈ ಊರಿನಲ್ಲಿ ಸಿಗುವ ಬಗ್ಗೆ ಸಂಶಯವನ್ನೂ ಒಂದಿಷ್ಟು ವ್ಯಕ್ತಪಡಿಸಿದ.

ಬೆಳಗಾಗಿ ನಾನೆದ್ದು ಏನೇನೆಲ್ಲ ನೆನೆಯುತ್ತ ಇರುವಷ್ಟರಲ್ಲಿ ಈ ನನ್ನ ಅದ್ಭುತ ಐಡಿಯಾ ಪುನಃ ತಲೆಗೆ ಹೊಕ್ಕು, ಕೆಲ ಸ್ನೇಹಿತರಿಗೆ ತಮ್ಮ ಪೂರ್ತಿ ವಿಳಾಸವನ್ನು ಕಳಿಸಲು ಹೇಳಿದೆ. ಅಷ್ಟರಲ್ಲಿ ನೆನಪಾದುದ್ದು ಅವೆಲ್ಲವನ್ನು ಸಂಗ್ರಹಿಸಿ ಬರೆದಿಡಲು ವಿಳಾಸ ಪುಸ್ತಕ ನನ್ನ ಬಳಿ ಇಲ್ಲವೆಂಬುದು. ಸ್ಮಾರ್ಟ್ ಫೋನ್, ಇಮೇಲ್, ಇತ್ಯಾದಿ ತಂತ್ರಜ್ಞಾನ ಬಂದ ಮೇಲೆ ಮಾಯವಾದ ಅದೆಷ್ಟೋ ವಸ್ತುಗಳ ಸಾಲಿನಲ್ಲಿ ಅಡ್ರೆಸ್ ಪುಸ್ತಕಗಳು ಸೇರುತ್ತವೆ. ಬಹುಷಃ ಈ ಪುಟ್ಟ ದುರಂತ ಕೆಲವೊಂದು ತಲೆಮಾರಿನ ಕರ್ಮವಷ್ಟೇ, ಒಂದಷ್ಟು ವಯಸ್ಸಾದ ಮಂದಿಯದ್ದಲ್ಲ ಎಂಬ ಸ್ಪಷ್ಟೀಕರಣ ನೀಡಬೇಕೋ ಏನೋ.

ಅದ್ಯಾವುದೋ ಖಾಲಿ ಪುಸ್ತಕದಲ್ಲಿ ವಿಳಾಸಗಳ ಗುರುತು ಮಾಡಿದ್ದಾಯಿತು. ಕೇಳಿದವರೆಲ್ಲ 'ಆಹಾ, ಥ್ಯಾಂಕ್ಸ್' ಎಂದೇ ಹೇಳಿದವರಾಯಿತು. ಇನ್ನು ಲಾಸ್ಟ ಮಿನಿಟ್ ನಲ್ಲಿ ಗ್ರೀಟಿಂಗ್ ಕಾರ್ಡ್ಸ್ ಕೊಳ್ಳಲು ಹುಡುಕಬೇಕಿತ್ತು. ಇನ್ನ್ಯಾವುದೋ ಕೆಲಸದ ಬೆನ್ನೇರಿ ಈ ಹುಡುಕಾಟ ಪ್ರಾರಂಭಿಸಿದ್ದೂ ಆಯಿತು. ನನ್ನ ಏರಿಯಾದ ವಿಷಯ ಬಿಡಿ, ಸ್ವಲ್ಪ ದೂರದ 'ಪಾಶ್' ಎಂದೆನಿಸಿಕೊಳ್ಳುವ ವಠಾರದಲ್ಲಿಯೂ ಸಹ ಅದೆಷ್ಟೇ ಹುಡುಕಿದರೂ ಒಂದೇ ಒಂದು ಗ್ರೀಟಿಂಗ್ ಕಾರ್ಡ್ ಸಿಗಲಿಲ್ಲ. ನನಗಂತೂ ಹೆಚ್ಚು ಕಮ್ಮಿ ಅಂದರೆ ಇಪ್ಪತ್ತಾದರೂ ಬೇಕಿತ್ತು.

ಬೈಕ್ ಒಂದರ ಹಿಂದೆ ಕುಳಿತು ಹುಡುಕುತ್ತಾ ಹೋಗುತ್ತಿರಬೇಕಾದರೆ ಸುಮಾರು ವರ್ಷಗಳ ಹಿಂದೆ ಹೊಸ ವರ್ಷ, ದೀಪಾವಳಿ, ಯುಗಾದಿ ಮತ್ತು ಕೆಲವರ ಹುಟ್ಟು ಹಬ್ಬಕ್ಕೆಂದು ಗ್ರೀಟಿಂಗ್ ಕಾರ್ಡ್ಸ್ ಕಲಿಸುವ ಸಂಪ್ರದಾಯದಲ್ಲಿ ತೊಡಗುತ್ತಿದ್ದುದು ನೆನಪಿಗೆ ಬಂತು. ಕಾರ್ಡ್ ಗಳಲ್ಲಿ ಹಲವು ಭಿನ್ನವಾದ ರೀತಿಯವು, ಮ್ಯೂಸಿಕ್ ಬರುವಂತಹಾ ದುಬಾರಿಯವು, ಹಾಸ್ಯಾಸ್ಪದ, ಜೋಕ್ ಉಳ್ಳವು, ರೋಮಾಂಚನ ಕವಿತೆಗಳನ್ನು ಹೊಂದಿರುವವು, ಮತಷ್ಟು ಯಾವುದೋ ದಾನ ಧರ್ಮ ಸಂಸ್ಥೆಗಳ ಕಾರ್ಡ್ಸ್ ಗಳು, ಒಳಗೆ ಖಾಲಿಯಾಗಿರುವ, ನಮ್ಮದೇ ಸ್ವಂತ ಸೃಷ್ಟಿಸಿದ ಸಂದೇಶಗಳನ್ನು ಬರೆಯಬಹುದಾದಂತಹವು, ಇತ್ಯಾದಿ. ಸಾಲು ಸಾಲಾಗಿ ಜೋಡಿಸಿಟ್ಟ ಕಾರ್ಡುಗಳಿಂದ ಆಯ್ಕೆ ಮಾಡಿ, ಎರಡು ಗೆರೆ ಗೀಚಿಟ್ಟು ಅಂಚೆ ಚೀಟಿ ಅಂಟಿಸಿ ಕೆಂಪು ಪೋಸ್ಟ್ ಬಾಕ್ಸ್ ನಲ್ಲಿ ತುರುಕಿ, ಮತ್ತೆ ಖಾಖಿ ಸಮವಸ್ತ್ರ ಧರಿಸಿದ ಪೋಸ್ಟ್ ಮ್ಯಾನ್ ಒಂದಿಷ್ಟು ದಿನಗಳ ನಂತರ ಸೈಕಲಿನ ಮೇಲೆ ಟ್ರಿಂಗ್ ಟ್ರಿಂಗ್ ಎಂದು ಬೆಲ್ ಮಾಡುತ್ತಾ ನಮಗೆ ಬರೆದ ಕಾರ್ಡ್ ಅಥವಾ ಕಳಿಸಿದ್ದಕ್ಕೆ ಬಂದ ಉತ್ತರಕ್ಕೆ ಕಾತರದಿಂದ ಕಾಯುವ ದಿನಗಳವು.

ಮಧ್ಯಾಹ್ನದವರೆಗೆ ಹುಡುಕಿದ್ದೆ ಬಂತು. ಎಲ್ಲಿಯೂ ಸಿಕ್ಕದ ಗ್ರೀಟಿಂಗ್ ಕಾರ್ಡುಗಳ ನೆನೆಯುತ್ತಾ ಬೇರೆ ಯಾವುದಾದರೂ ಸುಲಭದ ಐಡಿಯಾ ಹೊಳೆಯಬಾರದಿತ್ತೇ ಎಂದು ಗೊಣಗುತ್ತಾ ಹಿಂತಿರುಗಿ ಬಂದದ್ದೂ ಆಯಿತು. ವಿಳಾಸಗಳನ್ನು ಸಂಗ್ರಹಿಸಿದ ಮೇಲೆ ಕಾರ್ಡ್ ಕಲಿಸದೇ ಇರುವುದು ತಪ್ಪು ಎಂದು ನಿನ್ನೆ ರಾತ್ರಿ ಇಡೀ ಎಲ್ಲರಿಗೂ ಅವರವರ ವ್ಯಯಕ್ತಿಕ ಆಸಕ್ತಿಗಳಿಗೆ ಹೋಲುವಂತೆ ಇಲ್ಲೊಂದು ಬರ್ಮಾ ಪೇಪರಿನ ಮೇಲೆ ಬರೆದ ಪತ್ರ, ಇಷ್ಟವಾದ ಕವಿತೆಯ ಒಂದೆರಡು ಸಾಲು, ಅಲ್ಲೊಂದು ಸಂಗ್ರಹಿಸಿದ ಹಳೆಯ ಚಿತ್ರ, ಒಂದು ಬುಕ್ ಮಾರ್ಕ್, ಹೀಗೆ ಕವರುಗಳಿಗೆ ಹಾಕಿ ಗಮ್ ಅಂಟಿಸಿ ಮೇಜಿನ ಮೇಲೆ ಒಂದರ ಮೇಲೊಂದು ಇಟ್ಟಾಯಿತು. ಅಂಚೆ ಕಛೇರಿಗೆ ಹೋಗುವ ಮುಹೂರ್ತ ಇನ್ನೂ ಬರಬೇಕಷ್ಟೆ. ಅದಕ್ಕಿನ್ನೂ ಲಾಸ್ಟ ಮಿನಿಟ್ ಬರಲಿಲ್ಲ.

ಮುಂದಿನ ಡಿಸೆಂಬರ್ ಬಂದಾಗ ಇಂತಹಾ ಐಡಿಯಾ ಮತ್ತೆ ಹೊಳೆಯದಿದ್ದರೆ ಸಾಕು ಎಂದು ಒಂದೆಡೆ ಈಗಲೇ ಅನಿಸುತ್ತಿದೆ. ಆದರೂ ಇನ್ನೊಂದೆಡೆ ಬಹುಷಃ ವರ್ಷಕ್ಕೆ ಒಂದು ಸಾರಿಯಾದರೂ ಅಂಚೆ ಕಚೇರಿಯ ಮುಖ ನೋಡಬೇಕು, ಕೆಂಪು ಪೋಸ್ಟ್ ಬಾಕ್ಸ್ ನ ಮುಂದೆ ನಿಲ್ಲಬೇಕು ಎಂದೆನಿಸುತ್ತದೆ. ಗ್ರೀಟಿಂಗ್ ಕಾರ್ಡ್ಸ್ ಕಳಿಸುವುದು, ಪಡೆಯುವುದು ಇಲ್ಲಿನ ಮುಖ್ಯ ವಿಷಯವಲ್ಲ. ಕಥೆಯ ನೀತಿ ಎಂಬುವುದೊಂದಿದ್ದರೆ ಅದು ಈ ಅತೀ ವೇಗದ ಜೀವನದಲ್ಲಿ ಒಂದಿಷ್ಟಾದರೂ, ಕೆಲವೊಮ್ಮೆಯಾದರೂ ನಾವು ಸ್ವಲ್ಪ ನಿಧಾನವಾಗಿ ವಿರಾಮವನ್ನು ಅನುಭವಿಸಬೇಕೆಂಬುದು. ಕಾರ್ಡುಗಳನ್ನು ಬರೆಯುವುದು, ಒಂದು ಸಣ್ಣ ವಾಕ್, ಬೆಳಗ್ಗೆ ಹತ್ತು ನಿಮಿಷ ಪೇಪರ್ ಅಥವಾ ಕಾಫಿಯ ಜೊತೆಗೆ, ಒಂದೆರಡು ನಿಮಿಷ ಧ್ಯಾನ, ಹೀಗೆ ಜೀವನವನ್ನು ಕೆಲ ನಿಮಿಷಗಳ ಕಾಲವಾದರೂ ನಿಧಾನವಾಗಿ ಕಳೆಯುವುದರಲ್ಲಿರುವ ಸಂತೋಷ ಅದಕ್ಕೆ ಸಮ.

ಈ ಮುಗಿಯುತ್ತಿರುವ ವರುಷದಲ್ಲಿ ಜಗತ್ತಿನ ಸುದ್ಧಿಗಳಲ್ಲಿ ಕೊಂಡಾಡುವಂತದ್ದು ಬೆರಳೆಣಿಕೆಯಷ್ಟೂ ಸಹ ಇರಲಿಲ್ಲ. ದುರಂತದ ನಂತರ ದುರಂತ ಎಂಬುದೇ ಮಂತ್ರ ವಾಗಿದ್ದ ವರುಷ ಸದ್ಯ, ಮುಗಿದೇ ಬಂತು. ಓದುಗರಿಗೆಲ್ಲಾ ಗ್ರೀಟಿಂಗ್ ಕಾರ್ಡ್ಸ್ ಕಳಿಸಲು ಸಾಧ್ಯವಾಗದು. ನನ್ನ ಹೊಸ ವರ್ಷದ ಶುಭಾಶಯಗಳನ್ನು ಇಲ್ಲಿ ಸ್ವೀಕರಿಸಿ. ಹೊಸ ವರುಷ ತಾಳ್ಮೆ, ನಿಧಾನದ ಗಳಿಗೆ, ಹೊಸ ಹರುಷವ ತರಲಿ.

No comments: