Saturday, February 13, 2016

On Forest Rights Act, Tribals, etc: In Binkana, Kannada Prabha column

We met three people from three different tribes in Kodagu district recently. It was wonderful, heartbreaking, inspiring and so many other things. But more on that later.
In this past Sunday's Binkana column in Kannada Prabha, I wrote on the Forest Rights Act, tribals in general and stuff along those lines. 

Oh, I also talk about this collection of stories called 'The Adivasi Will Not Dance' by Hansda Sowvendra Shekhar. Read it, read it. It is political, quite subtle at times, which I always love, and beautifully written. 

"ನನ್ನ ಹೆಸರು ಮಂಗಲ್ ಮುರ್ಮು. ನಾನೊಬ್ಬ ಸಂಗೀತ ಕಲಾವಿಧ. ಇಲ್ಲ, ನಿಲ್ಲಿ....ನಾನೊಬ್ಬ ರೈತ. ಅಥವಾ... ರೈತನಾಗಿದ್ದೆ. ರೈತನಾಗಿದ್ದೆ ಎಂಬುದು ಸರಿ. ಯಾಕೆಂದರೆ ನಾನೀಗ ವ್ಯವಸಾಯ ಮಾಡುವುದಿಲ್ಲ. ನನ್ನ ಹಳ್ಳಿ ಮತಿಅಜೊರ್, ಅಮ್ರಪರ ಬ್ಲಾಕ್, ಪಾಕುರ್ ಜಿಲ್ಲೆಯಲ್ಲಿ ಹೆಚ್ಚು ಸಂಥಲರು ವ್ಯವಸಾಯ ಮಾಡುವುದಿಲ್ಲ. ನಮ್ಮಲ್ಲಿ ಕೆಲವುಮಂದಿಗೆ ಮಾತ್ರ ಭೂಮಿ ಉಳಿದಿದೆ, ಹೆಚ್ಚಿನ ಭೂಮಿಯನ್ನು ಗಣಿಗಾರಿಕೆ ಕಂಪನಿಯೊಂದು ವಶಪಡಿಸಿಕೊಂಡಿದೆ."

ಈ ದೇಶದ ಸುಪ್ರೀಂ ಕೋರ್ಟ್ ನೀಡುತ್ತಿರುವ ಹೇಳಿಕೆಗಳು, ಮಾಡುತ್ತಿರುವ ಕಾಯ್ದೆಗಳನ್ನು ನೋಡಿದರೆ ಟಾಂಜಾನಿಯಾ ವಿಧ್ಯಾರ್ಥಿ ಪ್ರಕರಣ, ರೋಹಿತ್ ವೇಮುಲ ಆತ್ಮಹತ್ಯೆ, ವಾಕ್ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆಗಳ ಮಧ್ಯೆಯೂ ಭಾರತ ನಡೆಯುತ್ತಿರುವ ದಿಕ್ಕಿನ ಬಗ್ಗೆ ವಿಶ್ವಾಸ ಎಲ್ಲೋ ಒಂದಿಷ್ಟು ಜೀವಂತವಿರುತ್ತದೆ. ಮೊನ್ನೆಯಷ್ಟೇ ಫಾರೆಸ್ಟ್ ರೈಟ್ಸ್ (ಅರಣ್ಯ ಹಕ್ಕು) ಕಾಯ್ದೆಗೆ ಸಂಬಂಧಪಟ್ಟಂತೆ, ತುಂಬಾ ಸರಳವಾಗಿ ಹೇಳಬೇಕೆಂದರೆ, ಮದ್ರಾಸ್ ಹೈ ಕೋರ್ಟ್, ತಮಿಳು ನಾಡು ಸರ್ಕಾರಕ್ಕೆ ಈ ಕಾಯ್ದೆಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಕೇಂದ್ರೀಯ ಕಾಯಿದೆ ಆದರು ತಮಿಳು ನಾಡು ಇದನ್ನು ಈ ವರೆಗೆ ಹಲವು ಕಾರಣಗಳಿಂದಾಗಿ ಜಾರಿಗೆ ತಂದಿರಲಿಲ್ಲ.

ದೇಶದ ಎಲ್ಲಾ ಲಾಗಳ ಹಾಗೆ ಈ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದ ರೀತಿಯಲ್ಲಿ ಹಲವು ರಾಜ್ಯಗಳಲ್ಲಿ ಕುಂದು-ಕೊರತೆಗಳಿವೆ. ಈ ಕಾಯಿದೆಯ ಪ್ರಕಾರ ಬುಡಕಟ್ಟು ಜನಾಂಗ ಹಾಗು ಅರಣ್ಯ ನಿವಾಸಿಗಳಿಗೆ ಅವರು ಬೇಸಾಯ ಮಾಡುತ್ತಿರುವ ಭೂಮಿ, ನೆಲೆಸಿರುವ ಅರಣ್ಯದ ಮೇಲೆ ಹಕ್ಕಿದೆ. ಪಟ್ಟೆ, ಇನ್ನಿತರ ಭೂಮಿಗೆ ಸಂಬಂಧಪಟ್ಟ ದಾಖಲೆಗಳ ಪರಿಕಲ್ಪನೆ ಇರದ ಇವರು ತಮ್ಮ ಹಕ್ಕಿನ ಭೂಮಿಯನ್ನು ಪಡೆಯಲು ಕೆಲವು ವಿಧಾನಗಳನ್ನು ಈ ಕಾಯಿದೆ ವಿವರಿಸುತ್ತದೆ. ಕರ್ನಾಟಕದಲ್ಲಿ ಸಲ್ಲಿಸಿದ ಅದೆಷ್ಟೋ ಜನರ ದಾಖಲೆಗಳ್ಳನ್ನು ಕ್ಷುದ್ರ ಕಾರಣಗಳಿಗೆ ನಿರಾಕರಿಸಲಾಗಿದೆ ಎಂಬ ಆರೋಪ ಸುದ್ದಿಯಾದರೆ, ಚತ್ತೀಸಗರ್ಹ್ ರಾಜ್ಯದ ರೋಘಾಟ್ ಶ್ರೇಣಿಯ ಸುತ್ತ ಮುತ್ತಲಿರುವ ಹಳ್ಳಿಗಳಲ್ಲಿನ ಸ್ತಿತಿ ಇನ್ನಷ್ಟು ಗಂಭೀರವಾಗಿದೆ.

ಈ ಪರ್ವತ ಶ್ರೇಣಿಯಲ್ಲಿ ದೇಶದ ಎರಡನೆಯ ಅತಿ ದೊಡ್ಡ ಉಕ್ಕು ಅದಿರಿನ ಶೇಖರಣೆ ಇದೆ ಎಂದು ನಂಬಲಾಗಿದೆ. ಮೂರು ದಶಕಗಳ ಹಿಂದೆಯೇ ಗಣಿಗಾರಿಕೆ ಮಾಡಲು ಸರಕಾರ ಆಸಕ್ತಿ ವ್ಯಕ್ತ ಪಡಿಸಿದರೂ ಇತೀಚೆಗಷ್ಟೇ ಅದಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಕಟ್ಟಲು ಮುಂದಾಗಿದೆ. ರೈಲು, ಆಸ್ಪತ್ರೆ, ಮನೆಗಳು, ಶಾಲೆ, ಇತ್ಯಾದಿ ನಿರ್ಮಿಸಲೆಂದು ಅದೆಷ್ಟೋ ಏಕರೆ ಮರಗಳನ್ನು ಬಿ.ಯೆಸ್.ಎಫ಼್., ಪೋಲಿಸ್ ಕಾವಲು ಪಡೆದು ರಾತ್ರೋ-ರಾತ್ರಿ ಕಡೆಯಲಾಗುತ್ತಿದೆ. ಸುತ್ತ ಮುತ್ತಲಿನ ಹಳ್ಳಿಯವರನ್ನು ತಲೆ ತಲಾಂತರದಿಂದ ಬದುಕಿದ ಭೂಮಿಯಿಂದ ಹೊರವೋಡಿಸಲಾಗುತ್ತಿದೆ. ಆ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ಜಾರಿಯಲ್ಲಿ ಇದ್ದು, ಅದರಡಿಯಲ್ಲಿ ಹಳ್ಳಿಯವರು ತಮ್ಮ ಜಮೀನಿನ, ತಮ್ಮ ಊರಿನ ಗಡಿರೇಖೆಯನ್ನು ದಾಖಲಿಸಿ ಸರ್ಕಾರಕ್ಕೆ ನೀಡಿದರೂ ಅವನ್ನು ಅಲಕ್ಷಿಸಿ ನಖಲಿ ದಾಖಲೆಗಳನ್ನು ಶೃಷ್ಟಿಸಿ ಪರಿಹಾರದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ವರದಿಗಳಿವೆ. ತಮ್ಮ ಹಕ್ಕಿಗೆ ಹೋರಾಡುವವರನ್ನು ಜೈಲಿಗೆ ತಳ್ಳಿ, ಹಿಂಸಿಸಿ ಭಯದ ವಾತಾವರಣವನ್ನು ಕಲ್ಪಿಸಲಾಗಿದೆ ಎಂದು ಸ್ತಳೀಯ ಸರ್ಕಾರ, ಉಕ್ಕಿನ ಕಂಪನಿಗಳ ಮೇಲೆ ಆರೋಪವಿದೆ.

ಉಕ್ಕಿನ ಖರ್ಖಾನೆಗಳು ಒಂದು ಶ್ರೇಣಿಯನ್ನು ನೆಲಸಮಮಾಡಲು ಬರುವ ಮೊದಲು ಇಂತಹಾ ವಾತಾವರಣವನ್ನು ಕಲ್ಪಿಸುವುದು ಸರ್ವೇ ಸಾಮಾನ್ಯವಾಗಿದೆ. ಬಳ್ಳಾರಿ, ಗೋವಾ, ಜಾರ್ಖಂಡ್, ಕುದುರೆಮುಖ, ಬಹಳ ಉದ್ದ ಹೋಗುವ ಪಟ್ಟಿಯದು. ಶತಮಾನಗಳಿಂದ ಮನೆಮಾಡಿಕೊಂಡು, ತಮ್ಮ ದೇವರ ಮನೆಯಾಗಿರುವ ಕಾಡನ್ನು ಬಿಡಬೇಕೆನ್ನುವ ತಾಕೀತು ಕೊಡಲು ಸರಕಾರ ಮುಂದಾದರೆ ಕಾಡಿನ ಮಕ್ಕಳ ಹಕ್ಕುಗಳನ್ನು ಬದಿಗಿಟ್ಟಂತೆ ಆಗುತ್ತದೆ. ಉಕ್ಕನ್ನು ತಯಾರಿಸದೆ ಇದ್ದರೆ, ಅಣೆಕಟ್ಟನ್ನು ಕಟ್ಟದಿದ್ದರೆ, ಹೈವೇಗಳನ್ನು ಮಾಡದಿದ್ದರೆ "ಪ್ರಗತಿ"ಯನ್ನು ಅಳಿಯುವುದಾದರೂ ಹೇಗೆ? ಪ್ರಗತಿಯ ಬೆಲೆ ಅದೆಷ್ಟು ಎಂಬ ಪ್ರಶ್ನೆಗೆ ಕೊಡಬಹುದಾದ ಉತ್ತರ, ಸಮರ್ಥಿಸಿಕೊಳ್ಳಬಹುದಾದ ಅಂಶಗಳು ಅನೇಕ, ಅವುಗಳಲ್ಲಿ ಒಂದೂ ಸುಲಭದ್ದಲ್ಲ.

ಬುಡಕಟ್ಟು ಜನಾಂಗದ ಜೀವನಶೈಲಿಯ ರೋಮಾಂಚನೆಯನ್ನು ಎತ್ತಿ ಹಿಡಿಯುವುದು ಸುಲಭ, ಅವರ ವೇಷ-ಭೂಷಣ, ಹಾಡು, ನೃತ್ಯ, ಭಾಷೆ, ಕರಕುಶಲತೆಯನ್ನು ಅನ್ಯಲೋಕದ್ದು ಎಂಬುವಂತೆ ಪರಿಗಣಿಸಿ ಅವುಗಳ ಬಗ್ಗೆ ಕಥೆ, ಸಾಕ್ಷ್ಯ ಚಿತ್ರಗಳನ್ನು ಕಲ್ಪಿಸುವುದು ಮುಖ್ಯವಾದರೂ, ಅದಷ್ಟರಲ್ಲೇ ನಮ್ಮ - ಸುಯೊಗಿಗಳ - ಜವಾಬ್ದಾರಿ ಮುಗಿಯುವುದಿಲ್ಲ, ಮುಗಿಯಬಾರದು. ಚರ್ಚೆಗೆ ಆಸ್ಪದ ನೀಡುವ ಅನಿವಾರ್ಯ, ಅವಸರ, ಏರುತ್ತಲಿದೆ. ಚರ್ಚೆಗೆ ಸರಿಯಾದ ವೇದಿಕೆ ದೊರಕದಿದ್ದಾಗ ಇಂತಹಾ ಸಮುದಾಯ ಎಕಾಂಗಿಯಾಗುತ್ತದೆ. ಈ ಜನಾಂಗಗಳ ಕಥೆಯಲ್ಲಿರುವ ರಾಜಕೀಯ ಅಂಶಗಳನ್ನು ಗುರುತಿಸಿ ಅವುಗಳನ್ನು ಉದ್ದೇಶಿಸುವುದು ಅಗತ್ಯ.

ಮೊದಲ ಸಾಲಿನ ಮಂಗಲ್ ಮುರ್ಮುನ ಕಥೆ ಇಲ್ಲಿ ಬರುತ್ತದೆ. ಜಾರ್ಖಂಡ್ ಸರ್ಕಾರದಲ್ಲಿ ಮೆಡಿಕಲ್ ಆಫೀಸರ್ ಆಗಿರುವ ಹನ್ಸದ ಸೌವೇಂದ್ರ ಶೇಖರ್ ಬರೆದಿರು 'ದಿ ಆದಿವಾಸಿ ವಿಲ್ ನಾಟ್ ಡಾನ್ಸ್' (ಆದಿವಾಸಿ ಕುಣಿಯುವುದಿಲ್ಲ) ಎಂಬ ಕಥಾ ಸಂಖಲನದಲ್ಲಿ ಶಿರ್ಶಿಖೆಯ ಕಥೆ ಮುರ್ಮುವಿನದ್ದು. ತನ್ನ ಜಮೀನು ಕಳೆದುಕೊಂಡ ಮುರ್ಮು ವ್ಯಾಪಾರಿಗಳ ಬಗ್ಗೆ ಕೇಳುತ್ತಾನೆ, ಮಿಷನರಿಗಳು ಬಂದು ತನ್ನ ಸಂಥಲರ ಹೆಸರು ಬದಲಾಯಿಸಿ, ತನ್ನ ಸರ್ನ ಧರ್ಮವನ್ನು ತ್ಯಜಿಸುವಂತೆ ಕೇಳುವುದರ ಬಗ್ಗೆ ಕಥೆ ಕೇಳುತ್ತಾನೆ. ಅರವತ್ತು ವರ್ಷದ ಮುರ್ಮು ಸಂಥಲರ ಹಾಡು, ನೃತ್ಯದ ಗುಂಪೊಂದರ ಮುಖಂಡ. ಸರ್ಕಾರದ ಕಾರ್ಯಕ್ರಮವೊಂದರಲ್ಲಿ ತನ್ನ ಜನಾಂಗದ ನೃತ್ಯ ಪ್ರದರ್ಶಿಸಬೇಕೆಂದು ಪತ್ರ ಬಂದಾಗ ಒಪ್ಪಿದ ಮುರ್ಮುಗೆ ತನ್ನ ಮಗಳನ್ನು ಕೊಟ್ಟ ಹಳ್ಳಿಯಲ್ಲಿ ಕಲ್ಲಿದ್ದಲು ಕಾರ್ಖಾನೆಗೆ ಬೇಕಾಗುವ ವಿಧ್ಯುಚ್ಚತ್ತಿ ಖರ್ಖಾನೆಯೊಂದು ಬರಲಿದ್ದು ಹಳ್ಳಿಯವರನ್ನು ಅಲ್ಲಿಂದ ಹೊರಹಾಕಿದ್ದು ತಿಳಿದುಬರುತ್ತದೆ. ಮಗಳು, ಮೊಮ್ಮಕ್ಕಳು ಅವನ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಕಾರ್ಖಾನೆಯ ಅಡಿಪಾಯದ ಮೊದಲ ಕಲ್ಲನ್ನು ದೇಶದ ರಾಷ್ಟಪತಿ ಹಾಕುವ ಸಂಧರ್ಭ ನಡೆಯುವ ಭರ್ಜರಿ ಕಾರ್ಯಕ್ರಮದಲ್ಲಿ ಮುರ್ಮು ಮತ್ತು ಅವನ ಗುಂಪು ಕುನಿಯಬೇಕೆಂಬುದು ಅವನಿಗೆ ತಿಳಿದು ಬರುತ್ತದೆ. ಇಷ್ಟರ ವರೆಗೆ ಒಳಗಿಂದೊಳಗೆ ಕೊರಗಿದ ಮುರ್ಮು ಕಾರ್ಯಕ್ರಮದ ದಿನ ಧೈರ್ಯದಿಂದ ಮೈಕ್ ಹಿಡಿದು ರಾಷ್ಟಪತಿಯನ್ನು ಉದ್ದೇಶಿಸಿ, ಹಾಡಿ ಕುಣಿಯಲು ಕಾರಣವೇನಿದೆ? ಈ ಕಾರ್ಖಾನೆಯು ನಮ್ಮ ಆದಿವಾಸಿಗಳ ಅಂತ್ಯವಾಗುತ್ತದೆ. ನಮ್ಮ ಭೂಮಿ, ನಮ್ಮ ಮನೆಗಳನ್ನು ಹಿಂತಿರುಗಿಸುವವರೆಗೂ ನಾವು ಆದಿವಾಸಿಗಳು ಕುಣಿಯುವುದಿಲ್ಲ ಎಂದು ಹೇಳುತ್ತಿರುವ ಮಧ್ಯದಲ್ಲೇ ಕಥೆ ಮುಗಿಯುತ್ತದೆ.

"ನಾವು ಬೊಂಬೆಗಳು. ಯಾರೋ ಆನ್ ಬಟನ್ ಒತ್ತುತ್ತಾರೆ. ಯಾರೋ ನಮ್ಮ ಹಿಂದೆ ಕೀ ತಿರುಗಿಸುತ್ತಾರೆ. ನಾವು ಸಂಥಲರು ನಮ್ಮ ತಮಕ, ತುಂಡಕ, ತಿರಿಯೋ ಭಾರಿಸುತ್ತಿರಬೇಕಾದರೆ ಯಾರೋ ನಮ್ಮ ಕುಣಿತದ ಭೂಮಿಯನ್ನೇ ಕಿತ್ತುಕೊಳ್ಳುತ್ತಾರೆ. ಹೇಳಿ, ನಾನು ಹೇಳುತ್ತಿರುವುದು ತಪ್ಪೇ?"

ಮುರ್ಮುವಿನ ಪ್ರಶ್ನೆಗೆ ಉತ್ತರ ನೀಡಲು ಶಬ್ಧಗಳ ಹಿಂದೆ ತಲೆಮಾರುವುದು ಸಾಧ್ಯವಿಲ್ಲ, ತಲೆ ಬಾಗಿಸಬೇಕಷ್ಟೇ.

No comments: