Sunday, July 17, 2016

On Grafitti Art : Binkana Column in Kannada Prabha

On graffiti art, national parks, the commons and how the idea of freedom of expression is not an absolute right, in Kannada Prabha. 

Published June 26, 2016

ಅಮೇರಿಕಾದ ಶೇಖಡ ಇಪ್ಪತ್ತರಷ್ಟು ಭೂಮಿ ರಾಷ್ಟ್ರೀಯ ಉದ್ಯಾನವನಗಳಾಗಿ ವಿಂಗಡಿಸಲಾಗಿದೆ. ಯೋಸೆಮೈಟ್, ಗ್ರಾಂಡ್ ಕ್ಯಾನ್ಯನ್ ಇತ್ಯಾದಿ ಆ ದೇಶದವರ ಮನೆ ಹಿತ್ತಲಾದರೆ, ಉಳಿದ ದೇಶದವರಿಗೆ ಈ ಉದ್ಯಾನವನಗಳಲ್ಲಿ ತೆಗೆದ ಅದೆಷ್ಟೋ ಹಾಲಿವುಡ್ ಸಿನೆಮಾಗಳ ಮೂಲಕ ಚಿರಪರಿಚಿತವಾಗಿವೆ. ರಾಷ್ಟ್ರೀಯ ಉದ್ಯಾನವನಗಳು ದೇಶದ ಹೆಮ್ಮೆಯ ಸ್ವತ್ತು ಎಂಬುದನ್ನು ಅಮೇರಿಕದವರು ತುಂಬಾ ಗಂಭೀರವಾಗಿ ನಂಬುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಹೀಗಿದೆ ನೋಡಿ.

ಕೆಲ ದಿನಗಳ ಹಿಂದೆ ನೀಡಿದ ತೀರ್ಪು. ಘಟನೆಯ ಪ್ರಾರಂಭ ಆದದ್ದು ಹೆಚ್ಚು ಕಮ್ಮಿ ಒಂದೂವರೆ ವರ್ಷಗಳ ಹಿಂದೆ. ರೆಡ್ಡಿಟ್ ಎಂಬ ಒಂದು ಸೋಷಿಯಲ್ ಮೀಡಿಯಾ ಫೋರಂನಲ್ಲಿ ಒಂದು ವರ್ಷದ ಹಿಂದೆ ಅದರ ಚಾರಣ ಮತ್ತು ಟ್ರೆಕ್ಕಿಂಗ್ ಗುಂಪಿನ ಸದಸ್ಯನೊಬ್ಬನ ಗಮನಕ್ಕೆ ಯೋಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜಲಪಾತವೊಂದರ ಹತ್ತಿರ ಕಲ್ಲಿನ ಮೇಲೆ ಒಬ್ಬ ಆರ್ಟಿಸ್ಟ್ ಚಿತ್ರ ಬರೆದಿದ್ದಾಳೆ ಎಂಬುದು ತಿಳಿದು ಬಂತು. ರೆಡ್ಡಿಟ್ ನಲ್ಲಿ ಇದರ ವಿಷಯ ಬರೆದಾಗ ಇನ್ನೊಂದಷ್ಟು ಜನ ಈ ಕಲಾವಿದೆಯ ಬಗ್ಗೆ ಚರ್ಚೆ ಮಾಡಲು ಮುಂದಾದರು. ಅಂತರ್ಜಾಲದ ಬಲು ಕಾರ್ಯಶೀಲ ಗ್ರಾಹಕರಿಗೆ ಈ ಕಲಾವಿದೆಯನ್ನು ಪತ್ತೆ ಹಚ್ಚಲು ಹೆಚ್ಚು ಸಮಯ ಬೇಕಾಗಲಿಲ್ಲ. ಸ್ವಲ್ಪ ಸಮಯದಲ್ಲೇ ಈ ವಿಷಯ ಆ ಚಾರಣ ಗುಂಪಿನಿಂದ ಹೊರಗೆ ಹೋಗಿ ಹೊರ ಜಗತ್ತಿನ, ಅಂತರ್ಜಾಲ-ಬಾಹ್ಯ ಲೋಕದ ಗಮನ ಸೆಳೆಯತೊಡಗಿತು.

ಚರ್ಚೆಯ ಗುರಿಯಾದ ಕಲಾವಿದೆ ಇಪ್ಪತ್ತಮೂರು ವರ್ಷದ ನ್ಯೂ ಯಾರ್ಕ್ ನಿವಾಸಿ ಕೆಸಿ ನಾಕೇಟ್ ಎಂಬುವ ಗ್ರಾಫಿಟಿ ಆರ್ಟಿಸ್ಟ್. ಗ್ರಾಫಿಟಿ ಕಲೆ ಎಂಬುದು ನಿರಂತರ ಚರ್ಚೆಗೆ ಒಳಗಾಗುವ ಕಲೆ, ಕಾಂಟೆಂಪೊರರಿ ಕಲೆಯ ಒಂದು ಅಂಗ. ಸಾರ್ವಜನಿಕ ಗೋಡೆ, ಕಟ್ಟಡ, ಬೀದಿ, ಸೇತುವೆಯ ಅಡಿ ಇತ್ಯಾದಿ ಮುಖಗಳ ಮೇಲೆ ಚಿತ್ರ ಬರೆಯುವುದಕ್ಕೆ ಗ್ರಾಫಿಟಿ ಎಂದು ಕರೆಯುತ್ತಾರೆ. ಕ್ರಾಂತಿಕಾರಿ ಘೋಷಣೆ, ಹೇಳಿಕೆಗಳನ್ನು ಪೈಂಟ್ ಮಾಡುವ ಸಂಪ್ರದಾಯದಿಂದ ಹುಟ್ಟಿ ಬಂದ ಕಲೆ ಗ್ರಾಫಿಟಿ. ಇರಾನ್, ಅಫ್ಘಾನಿಸ್ತಾನ್ ಅಂತಹಾ ದೇಶಗಳಲ್ಲಿ ಗ್ರಾಫಿಟಿ ಕಲೆಗೆ ದೊಡ್ಡ ರಾಜಕೀಯ ಅರ್ಥ ಇದೆ. ಹೆಚ್ಚಿನ ಶಾಂತಿಯುತ ದೇಶಗಳಲ್ಲಿ ಗ್ರಾಫಿಟಿ ಕಾನೂನಿಗೆ ಬಾಹ್ಯ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದೆಡೆಯಲ್ಲಿ ಆರ್ಟ್ ಪ್ರಾಜೆಕ್ಟ್, ನಗರವನ್ನು ಚೆಂದಗೊಳಿಸುವ ಸಂಬಂಧದಲ್ಲಿ ನಗರಾಭಿವೃದ್ಧಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಕಲಾವಿದರನ್ನು ಗ್ರಾಫಿಟಿ ಮಾಡಲು ಆಹ್ವಾನಿಸುವುದು ಹಲವೆಡೆ ಫ್ಯಾಷನ್ನಲ್ಲಿ ಇದೆ. ಬೆಂಗಳೂರಿನ ಬೀದಿಗಳಲ್ಲಿ - ಚರ್ಚ್ ಸ್ಟ್ರೀಟಿನ ಗೋಡೆಗಳಿಂದ ಹಿಡಿದು ಡಬಲ್ ರೋಡಿನ ಫ್ಲೈ ಓವರಿನ ಅಡಿಯಲ್ಲಿ ಆಗಿಂದಾಗೆ ಬದಲಾಗುವ ಗ್ರಾಫಿಟಿ ನಾವೆಲ್ಲರೂ ನೋಡಿರುತ್ತೇವೆ.

ಗ್ರಾಫಿಟಿ ಕಲೆಯ ಮುಖ್ಯ ವಾಹಿನಿಯಲ್ಲಿ ನಿಧಾನವಾಗಿ ಸೇರುತ್ತಿರುವುದೇನೋ ನಿಜ. ಆದರೆ ನಾಕೇಟ್ ವಿಷಯದಲ್ಲಿ ಮೂಡುವ ಪ್ರಶ್ನೆಗಳು ಕಲೆಯೆಂದರೇನು, ಕಲಾ ಸ್ವಾತಂತ್ರ್ಯವೆಂದರೇನು ಎಂಬುದನ್ನು ಮೀರಿ ನಾಗರೀಕತೆಯ ವಿಷಯವನ್ನು ಯೋಚಿಸುವಂತೆ ಮಾಡುತ್ತದೆ. ಸುಮಾರು ತಿಂಗಳುಗಳ ಕಾಲ ನಾಕೇಟ್ ಅಮೇರಿಕಾದ ರಾಷ್ಟ್ರೀಯ ಉದ್ಯಾನವನ ಸ್ಮಾರಕಗಳ ಮೇಲೆ ಸಣ್ಣ ಸಣ್ಣ ಚಿತ್ರಗಳನ್ನು ಸುಲಭವಾಗಿ ಅಳಿಸಲಾಗದ ಬಣ್ಣಗಳಲ್ಲಿ ಬಿಡಿಸಿ ಈ ಚಿತ್ರಗಳ ಅಡಿಯಲ್ಲಿ 'ಕ್ರೀಪಿತಿಂಗ್ಸ್' ಎಂದು ಹಸ್ತಾಕ್ಷರ ಬರೆದು ಅವುಗಳ ಫೋಟೋ ತೆಗೆದು ತನ್ನ ಇನ್ಸ್ಟಾಗ್ರಾ ನಲ್ಲಿ ಹಾಕಿದ್ದಳು. ಅವಳ ಫಾಲ್ಲೋರ್ಸ್ ನಲ್ಲಿ ಯಾರೋ ಒಬ್ಬರು ಆಕ್ಷೇಪ ವ್ಯಕ್ತ ಪಡಿಸಿದಾಗ 'ಹೌದು, ನಾನು ಕೆಟ್ಟವಳು' ಎಂದು ವ್ಯಂಗ್ಯವಾಗಿ ಹೇಳಿದ್ದಳಂತೆ. ರೆಡ್ಡಿಟ್ ನ ಗುಂಪುಗಳಲ್ಲಿ ಇವಳ 'ಕಲೆ' ಯ ವಿಷಯ ಹೊರಬಂದಾಗ ಅದು ನ್ಯಾಷನಲ್ ಪಾರ್ಕ್ಸ್ ಸೆರ್ವಿಸ್ ಅಧಿಕಾರಿಗಳ ಗಮನಕ್ಕೆ ಬಂತು. ನ್ಯಾಯಾಲಯದಲ್ಲಿ ತಪ್ಪು ಒಪ್ಪಿದ ನಾಕೇಟ್ ಅಮೇರಿಕಾದ ರಾಷ್ಟ್ರೀಯ ಉದ್ಯಾನವನಗಳಿಗೆ ಹೋಗುವುದನ್ನು ನಿಷೇದಿಸಲಾಗಿದೆ. ಇನ್ನೂರು ಗಂಟೆ ಕಮ್ಯುನಿಟಿ ಸೆರ್ವಿಸ್ ಮತ್ತು ದಂಡ ವಿಧಿಸಲಾಗಿದೆ.

ಭಾರತದಲ್ಲಿ ಮೊನ್ನೆಯಷ್ಟೇ ರಾಷ್ಟ್ರೀಯ ಉದ್ಯಾನವನಗಳಲ್ಲಿರುವ ಕಸದ ಡಬ್ಬಿಗಳನ್ನು ತೆಗೆಯಬೇಕು, ಬಂದವರು ತಮ್ಮ ಕಸವನ್ನು ತಮ್ಮೊಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬ ನಿಯಮ ಜಾರಿಗೆ ಬಂದಿದೆ. ಗೋಲ್ ಗುಂಬಜ್ ನಿಂದ ಹಿಡಿದು ಚಾರ್ಮಿನಾರ್, ಬಾದಾಮಿ ಗುಹೆ, ಹಂಪಿ, ಬೇಲೂರು, ಯಾವ ಪ್ರವಾಸಿ ತಾಣ, ಯಾವ ಸಾಂಸ್ಕೃತಿಕ ಸ್ವತ್ತಿಗೆ ಭೇಟಿ ನೀಡಿದರು ನಮ್ಮಲ್ಲಿನ ಹೆಸರಿಲ್ಲದ ಗ್ರಾಫಿಟಿ 'ಕಲಾವಿದರ' ಕಲೆ ಕಣ್ಣಿನ ಹುಣ್ಣಿನಂತೆ ಕಂಡುಬರುತ್ತದೆ. ಅದೆಷ್ಟೇ ದಂಡ ವಿಧಿಸಲಾಗುವುದು ಎಂಬ ಬೋರ್ಡುಗಳಿದ್ದರೂ ಇಂತಹಾ ರಾಮು ಲವ್ಸ್ ರೇಖಾ ಎಂದು ಕಲ್ಲಿನಲ್ಲಿ ಕಷ್ಟಪಟ್ಟು ಕೊರೆಯುವ ಕಲಾವಿದರನ್ನು ಸಾರ್ವಜನಿಕ ಸ್ಥಳಗಳಿಂದ ಬ್ಯಾನ್ ಮಾಡುವ ಉದಾಹರಣೆ ಬರುವುದು ದೂರದ ಕನಸಷ್ಟೇ.

ನಾಕೇಟ್ ಕೇಸಿಗೆ ಪುನಃ ಬಂದರೆ, ಒಂದಿಷ್ಟು ಜನ ಕಲಾ ಸ್ವಾತಂತ್ರ್ಯದ ಉಲ್ಲಂಘನೆ ಇಲ್ಲಿ ನಡೆದಿರುವ ಬಗ್ಗೆ ಧ್ವನಿ ಎತ್ತಿರಬಹುದು. ವಾಕ್ ಸ್ವಾತಂತ್ರ್ಯವನ್ನು ಉಸಿರುಕಟ್ಟಿ ಪ್ರತಿವಾದಿಸುತ್ತೇನೆ. ಆದರೆ ದೇಶದ ಸಾಮೂಹಿಕ ಸ್ವತ್ತನ್ನು ಹಾಳು ಮಾಡುವ ಹಕ್ಕು ಯಾವುದೇ ವ್ಯಕ್ತಿಗಿಲ್ಲ. ಇಂತಹಾ 'ಕಲೆ' ಯಾವುದೇ ಅರ್ಥ, ಯಾವುದೇ ಮೌಲ್ಯವನ್ನು ಹೊಂದಿರುವುದಿಲ್ಲ. ಇದು ಸ್ಮಾರಕಗಳಿಗೆ ಸೀಮಿತವಾಗಿರಬೇಕು, ಅಭಿಪ್ರಾಯ, ಭಾವನೆಗಳಿಗಲ್ಲ. ಪ್ರಚಲಿತ ಅಭಿಪ್ರಾಯಗಳನ್ನು ಪ್ರಶ್ನಿಸಿದರೆ ಮಾತ್ರ ದೇಶದ ಸಂಸ್ಕೃತಿ ಬೆಳೆಯುತ್ತದೆ. ಐದು ಸಾವಿರ ವರ್ಷದ ನಾಗರೀಕತೆ ಅಂದಿನಿಂದ ಒಂದಿಷ್ಟು ಬದಲಾಗಲಿಲ್ಲ, ಅಥವಾ ಒಂದು ಪುಸ್ತಕ, ಒಂದು ಚಲನಚಿತ್ರ, ಒಂದು ಶಿಲ್ಪ ಅಥವಾ ಒಂದು ಕಲಾವಿದನ ಪೈಂಟಿಂಗ್ ನಿಂದ ಕುಸಿದು ಹೋಗುತ್ತದೆ ಎಂಬ ಗೊಡ್ಡು ನಂಬಿಕೆ ಹಾಸ್ಯಾಸ್ಪದವಷ್ಟೇ.

ಹೆಜ್ಜೆ ಗುರುತನ್ನು ಬಿಟ್ಟು ಬೇರೇನೂ ಬಿಡಬೇಡಿ, ನೆನಪುಗಳನ್ನು ಹೊರತು ಬೇರೆಯೇನು ತೆಗೆದುಕೊಂಡು ಹೋಗಬೇಡಿ ಎಂದು ಕೆಲವು ಸ್ಮಾರಕಗಳ ಮುಂದೆ ಬರೆದಿರುತ್ತಾರೆ. ಪುನರಾವರ್ತಿಸುತ್ತೇನೆ, ಈ ಮಾತು ಸ್ಮಾರಕಗಳ, ಸಮೂಹ ಸ್ವತ್ತಿನ ವಿಷಯದಲ್ಲಿ, ಅಭಿಪ್ರಾಯ, ನಂಬಿಕೆ, ಜಾತಿ, ದೇವರ ವಿಷಯದಲ್ಲಲ್ಲ. ಅವುಗಳಿಗೆ ಕಲಾವಿದರ, ಬರಹಗಾರರ, ಚಿಂತಕರ ಹೆಜ್ಜೆ ಗುರುತಿನ ಜೊತೆಗೆ ಪ್ರಶ್ನೆ, ವಿಮರ್ಶೆ, ಪರಿಶೀಲನೆ, ತಿರಸ್ಕಾರ ಮತ್ತು ಪುನವಿಮರ್ಶೆ ಉಸಿರಿನಷ್ಟು ಅಗತ್ಯ.

No comments: