Thursday, November 17, 2016

On Being a Flaneuse: Binkana Column in Kannada Prabha

ದೂರದ ಒಂದು ಊರಿನಿಂದ ಹಿಂತಿರುಗಿ ನನ್ನ ಊರಿಗೆ ಒಂದು ವಾರದ ಮಟ್ಟಿಗೆ ಹೋಗಿದ್ದಾಗ ನವರಾತ್ರಿ, ದಸರಾ ಹಬ್ಬದ ಕೊನೆಯ ದಿನಗಳು. ಲಾಂಗ್ ವೀಕೆಂಡ್ ಎಂದು ಮಹಾನಗರಗಳ ಸಾಫ್ಟ್ವೇರ್ ಕಾರ್ಮಿಕರು ನಮ್ಮ ಪುಟ್ಟ ಬೆಟ್ಟದ ಊರಿಗೆ ಬಂದು, ಇರುವ ಬರುವ ರೋಡುಗಳಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸಿ, ಎಲ್ಲೆಂದರಲ್ಲಿ ತಮ್ಮ ದೊಡ್ಡ ಗಾತ್ರದ ಕಾರುಗಳನ್ನು ನಿಲ್ಲಿಸಿ, ಸೆಲ್ಫಿ ತೆಗೆದುಕೊಂಡು, ಒಟ್ಟಾರೆ ಊರ ಜನರಿಗೆ ಬೇರೆಯೂರಿನಿಂದ ಬಂದ ಟೂರಿಸ್ಟ್ ಗಳಾಗಿ ಸಣ್ಣ ಮಟ್ಟಿಗಿನ ಕಿರುಕುಳ ನೀಡುತ್ತಾ ಇದ್ದರು. ಅಂತ ನನ್ನ ಊಹನೆ. ಈಗೀಗ ಮನೆಯಿಂದ ಹೊರಗೆ ಪೇಟೆಗೆ ಹೋಗುವ ಆಸಕ್ತಿ ಅನಿವಾರ್ಯಕ್ಕೆ ಮಾತ್ರ ಸೀಮಿತ, ಹೊಸದೇನಿದೆ ಎಂದು ನೋಡುವ ಅಭ್ಯಾಸವನ್ನು ಈ ಕಿರುಚುವ, ಕಸವನ್ನು ರೋಡಿನಲ್ಲಿ ಬಿಸಾಡುವ, ತಮ್ಮ ಪರಿಸರಕ್ಕೆ ಗೌರವ ಕೊಡದಿರುವವರು ಬಾಚಿಕೊಂಡಿದ್ದಾರೆ. ಕಾಫಿ, ಒಳ್ಳೆ ಮೆಣಸು, ಏಲಕ್ಕಿ, ಕಿತ್ತಳೆ, ಇತ್ಯಾದಿ ಬೆಳೆಯುವ ಆ ಪುಟ್ಟ ಊರಿನಲ್ಲಿ ಪ್ರವಾಸೋದ್ಯಮ ಆರ್ಥಿಕ ಸ್ತಿತಿಗೆ ತುಂಬಾ ಒಳ್ಳೆದಾದರೂ...ಅದೆಷ್ಟೋ ವಿಷಯ, ಜನರ ಹಾಗೆ ಇದು ಒಂದು ರೀತಿಯ ಎರಡು ದಿಕ್ಕಿನಲ್ಲಿ ಚೂಪಾಗಿರುವ ಖಡ್ಗ.

ಪ್ರವಾಸೋದ್ಯಮದ ಒಳಿತು ಕೆಡುಕುಗಳ ಬಗ್ಗೆ ಅದೆಷ್ಟೋ ಚರ್ಚೆ ಆಗಿದೆ. ಪುನರಾವರ್ತಿಸುವುದರಲ್ಲಿ ಹೊಸದೇನೂ ಸಹ ಮೂಡಿಬರುವಂತಿಲ್ಲ. ಅದರ ಬದಲು ನಡೆಯುವುದರ ಬಗ್ಗೆ ಒಂದಿಷ್ಟು ಮಾತನಾಡೋಣ. ಹೆಜ್ಜೆಹಾಕುತ್ತಾ ಒಂದು ಊರನ್ನು ನೋಡಿದರೆ ಆ ಊರನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ಎಂದು ನಂಬುವಳು ನಾನು. ಅದೆಷ್ಟೋ ವರ್ಷಗಳಿಂದ ನಡೆಯುವುದು ಎಂದರೆ ನನಗಿಷ್ಟ. ನಡೆಯಬೇಕಾಗುವಲ್ಲಿ ಬಿಡಿ, ಬೇಡವೆಂದಿರುವ ಸಂಧರ್ಭಗಳಲ್ಲಿಯೂ ಸಹ ನಡೆಯುವ ಅಭ್ಯಾಸ ನನಗಾಗಿದೆ. ಜಿಲ್ಲಾ ಗ್ರಂಥಾಲಯಕ್ಕೆ ಬೇಸಿಗೆಯ ರಜೆಯಲ್ಲಿ ಹೋಗುವುದರಲ್ಲಿಂದ ಶುರುವಾದ...ಒಂದು ರೀತಿಯ ಹಂಬಲವಿದು. ಹವ್ಯಾಸಕ್ಕಿಂತ ಮೀರಿದ್ದು, ಅದೆಷ್ಟೋ ಸಲ ಅನಿವಾರ್ಯವೆಂದೇ ಹೇಳಬಹುದು. ಮನೆಯಿಂದ ಗ್ರಂಥಾಲಯಕ್ಕೆ ಹೋಗುವ ನೇರ ದಾರಿಯನ್ನು ತೊರೆದು ಅದೆಷ್ಟೋ ಸುತ್ತಿಕೊಂಡು ಬೆಟ್ಟ ಏರುತ್ತ ಹೋಗಿ ಅರ್ಧ ಗಂಟೆಯಲ್ಲಿ ತಲುಪಿ ಕೊಣೆಯ ಮೂಲೆಯಲ್ಲಿ ಯಾರೂ ಅದುವರೆಗೆ ಕೈಗೆತ್ತಿಕೊಳ್ಳದ ಪುಸ್ತಕವನ್ನು ಹುಡುಕಿ ಅದರ ಪುಟಗಳನ್ನು ತಿರುಗಿಸುವ ಹಾಗೆ ದಾರಿ ಕಂಡುಕೊಂಡಿದ್ದೆ. ಅರ್ಧ ಗಂಟೆ ಆ ನನ್ನ ಪುಟ್ಟ ಊರಿಗೆ ಸ್ವಲ್ಪ ಬೆಳೆದ, ದೂರದ ದಾರಿಯೇ. ಮಹಾನಗರಗಳಲ್ಲಿ ಅಷ್ಟೇ ಹತ್ತಿರವೇ ಎಂದು ಕೇಳುವವರಾಗಿದ್ದೇವೆ ನಾವು.

ಕಳೆದ ತಿಂಗಳು ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಲ್ಲಿ ಹಲವು ದಿನಗಳ ಪ್ರವಾಸ ಹೋಗಿದ್ದೆ. ಆ ಎರಡು ವಾರ ಹೆಚ್ಚು ಕಮ್ಮಿ ಪ್ರತಿ ದಿನ ಆರು- ಏಳು ಗಂಟೆ ನಡೆಯುತ್ತಲಿದ್ದೆ. ಹೇಳವೊಂದು ಸಾರಿ ದಾರಿ ತಪ್ಪಿ (ಗೂಗಲ್ ಮ್ಯಾಪ್ಸ್, ಅಲ್ಲ ಮ್ಯಾಪ್ಸ್ ಓದುವ ಅತ್ಯಾವಶ್ಯಕ ನೈಪುಣ್ಯವನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕೆಂಬ ತೀರ್ಮಾನಕ್ಕೆ ನಾನು ತಲುಪಿದ್ದೇನೆ) ನಡೆದ್ದದ್ದಾದರೆ, ಹೆಚ್ಚಾಗಿ ಆ ತಿರುವಿನ ನಂತರ ಅದೇನಿರಬಹುದೆಂಬ ಕುತೂಹಲ ತೀರಿಸಲು ಹೆಜ್ಜೆ ಹಾಕಿದ್ದೇನೆ. ಅದೆಷ್ಟೋ ವರ್ಷಗಳ ನಂತರ, ಅಂದರೆ ನಾಲ್ಕು ವರ್ಷದ ನಂತರ ಒಬ್ಬಳೇ ಪ್ರಯಾಣ ಮಾಡಿದ ಅದ್ಭುತ ದಿನಗಳವು. ಒಬ್ಬಳೇ ಪ್ರಯಾಣಿಸುವುದರಲ್ಲಿ ಇರುವ ಮಜ, ತೃಪ್ತಿ, ನೆಮ್ಮದಿ ಅದೆಷ್ಟಿದೆ ಎಂದು ಮರೆತಿದ್ದೆ. ಹೊಸ ಸಂಬಂಧಗಳು ಬಂದಾಗ ಗಳಿಗೆಯಲ್ಲಿ ನಾವು ನಮ್ಮೊಟ್ಟಿಗಿನ ಸಂಬಂಧ ಸುಲಭವಾಗಿ ಮರೆತುಬಿಡುತ್ತೇವೆ.

ಅಚ್ಚುಕಟ್ಟಾದ ಯಾವುದೇ ಪ್ಲಾನ್ ಇಲ್ಲದೆ ನಡೆಯುವ ಸಂಪ್ರದಾಯಕ್ಕೆ ಐದು ಶತಮಾನಗಳ ಇತಿಹಾಸವಿದ್ದರೂ ಸರಿಯಾದ ವಿಶ್ಲೇಷಣೆ ಹತ್ತೊಂಬತ್ತನೆಯ ಫ್ರೆಂಚ್ ಸಮಾಜದಲ್ಲಿ ಕಂಡುಬರುತ್ತದೆ. ಫ್ಲ್ಯಾನೂರ್ ಎಂಬ ಶಬ್ದವು ಸಮಾಜದ ಲಖಕ, ಕಲಾವಿದ, ಇತ್ಯಾದಿ ಕ್ರಿಯಾತ್ಮಕ ಜನರಿಗೆ ಅಂಟಿಸಲಾಗುತ್ತಿತ್ತು. ವಿಧ ವಿಧದ ವರ್ಣನೆಗಳ ಪ್ರಕಾರ ಈ ಮನುಷ್ಯ ಸಮಯದ ಸೇವಕನಾಗಿರಲಿಲ್ಲ. ಇಡೀ ದಿನ ತನ್ನ ಸಿಟಿಯ ರಸ್ತೆಗಳಲ್ಲಿ ಅಡ್ಡಾಡ್ಡುತ್ತ ಜನರನ್ನು ಗಮನಿಸುತ್ತ, ಸಮಾಜವನ್ನು ಒಂದಿಷ್ಟು ದೂರದಿಂದ ವೀಕ್ಷಿಸುವವನು ಫ್ಲ್ಯಾನೂರ್. ತಾನು ನೋಡಿದ್ದನ್ನು ಬರೆಯುವುದಾಗಲಿ, ಚಿತ್ರಿಸುವ ಗೋಜಿಗಾಗಲಿ ಹೋಗುವವನಲ್ಲ. ಒಂದು ಜಾಗಕ್ಕೆಂದು ತಲುಪಬೇಕೆಂಬ ಉದ್ದೇಶ ಅವನದ್ದಲ್ಲ. ಫ್ಲ್ಯಾನೂರ್ ನ ಉದ್ದೇಶವಿಲ್ಲದ ನಡಿಗೆಯನ್ನು ವಿವರಿಸುತ್ತಾ, ತನ್ನ ಪೆಟ್ ಆಮೆಯನ್ನು ವಾಕ್ ಕರೆದುಕೊಂಡು ಹೋಗುವವನು ಎಂದು ಹೇಳಲಾಗುತ್ತಿತ್ತಂತೆ, ಅವನ ಸಮಯದ ನಿರ್ಲಕ್ಷೆಯನ್ನು ಮನವರಿಕೆ ಮಾಡಲೆಂದು. ಅಲ್ಲಿಂದ ಇಲ್ಲಿಯವರೆಗೆ ನಡೆಯುತ್ತಾ ಬಂದಂತೆ ಈ ಶಬ್ದದ ಅರ್ಥ ಬದಲುತ್ತಾ ಬಂದಿದೆ, ಹಲವು ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಅರ್ಥಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಹೆಚ್ಚಾಗಿ ಈ ಫ್ಲ್ಯಾನೂರ್ ಶ್ರೀಮಂತನಾಗಿರುತ್ತಿದ್ದ. ಮುಖ್ಯವಾಗಿ ಫ್ಲ್ಯಾನೂರ್ ಎಂಬ ಪದದ ಸ್ತ್ರೀಲಿಂಗವೇ ಇರಲಿಲ್ಲ. ಫ್ಲ್ಯಾನೂರ್ ಇಂದಿಗೂ ಅವನೇ, ಯಾವತ್ತೂ ಅವಳಲ್ಲ.

ಹೀಗೆಂದ ಮಾತ್ರಕ್ಕೆ ಸ್ತ್ರೀಯರು ನಡೆಯುತ್ತಿರಲಿಲ್ಲ, ತಾವು ಗಮನಿಸಿದ ಸಮಾಜವನ್ನು ಬರವಣಿಗೆಯಲ್ಲಿ, ಚಿತ್ರಗಳಲ್ಲಿ, ಚಲನಚಿತ್ರಗಳಲ್ಲಿ, ಫೋಟೋ ಗಳಲ್ಲಿ, ಕವಿತೆಗಳಲ್ಲಿ ಸೆರೆಹಿಡಿಯುತ್ತಿರಲಿಲ್ಲವೆಂದಲ್ಲ. ಅಂತಹ ಸ್ತ್ರೀ ಸ್ವಾತಂತ್ರ್ಯ ಸೂಚಿ ಅಭ್ಯಾಸಗಳ ಬಗ್ಗೆ ದಾಖಲಿಸಲು ಇತಿಹಾಸ ಮುಜುಗರ ಪಡುವ ವಾಡಿಕೆ ಶತಮಾನಗಳಿಂದ ನಡೆದುಬರುತ್ತಲಿದೆ. ಇತ್ತೀಚೆಗೆ ಹಲವು ಲೇಖಕರು ನಡೆಯುವುದರ ಬಗ್ಗೆ, ಅದರಲ್ಲೂ ಹೆಂಗಸರು ನಡೆದು, ಅದರಿಂದ ಮೂಡಿಬಂದ ಕಲೆಯ ಬಗ್ಗೆ ಬರೆಯುತ್ತಿದ್ದಾರೆ. ಕಾಕತಾಳೀಯವಾಗಿ ನಾನು ನನ್ನ ಹಾಲಿಡೇಗೆ ಹೋಗುವ ಒಂದೆರಡು ದಿನದ ಮೊದಲಷ್ಟೇ ಲಾರೆನ್ ಎಲ್ಕಿನ್ ಎಂಬ ಲೇಖಕಿ ಬರೆದ 'ಫ್ಲ್ಯಾನೂಸ್ - ವಿಮೆನ್ ವಾಕ್ ದಿ ಸಿಟಿ, ಇನ್ ಪ್ಯಾರಿಸ್, ನ್ಯೂ ಯಾರ್ಕ್, ಟೋಕಿಯೋ, ವೆನ್ನಿಸಿ ಅಂಡ್ ಲಂಡನ್' ಎಂಬ ಪುಸ್ತಕವನ್ನು ಓದಿ ಕೆಳಗಿಟ್ಟಿದೆ.

ಫ್ಲ್ಯಾನೂಸ್ ಎಂಬುದು ಇತ್ತೀಚಿಗೆ ಪ್ರಚಲಿತವಾಗುತ್ತಿರುವ ಶಬ್ದ. ನಿರೀಕ್ಷಯಂತೆ ಲೇಖಕಿಯರು ಸೃಷ್ಟಿಸಿದ ಪದ. ಸ್ತ್ರೀ ಫ್ಲ್ಯಾನೂರ್ ರನ್ನು ಫ್ಲ್ಯಾನೂಸ್ ಎಂದು ಕರೆಯಲಾಗುತ್ತಿದೆ. ಎಲ್ಕಿನ್ ಅವರ ಪುಸ್ತಕದಲ್ಲಿ ಬೇರೆ ಅದೆಷ್ಟೋ ಪುಸ್ತಕಗಳ ಉಲ್ಲೇಖವಿದೆ. ಮಾತ್ರವಲ್ಲ, ಸಿನಿಮಾ, ಕಾದಂಬರಿ, ಇತಿಹಾಸ, ಪತ್ರಿಕೋದ್ಯಮ ಇತ್ಯಾದಿಗಳ ಉದಾಹರಣೆ ತೆಗೆಯುತ್ತಾ ಶತಮಾನಗಳಿಂದ ಸ್ತ್ರೀಯರು ಸಹ ನಡೆಯುತ್ತಾ, ತಮ್ಮ ಸಿಟಿಯನ್ನು, ಸಮಾಜವನ್ನು ಅರ್ಥ ಮಾಡಿಕೊಂಡು ಬರುತ್ತಿರುವ ಬಗ್ಗೆ ಬರೆಯುತ್ತಾರೆ. ಆ ಉದಾಹರಣೆಗಳು ಇಲ್ಲಿ ಸೂಕ್ತವಲ್ಲ. ಮುಗಿಸುವ ಮೊದಲು ಆ ಪುಸ್ತಕದಿಂದ ಕೆಲ ಸಾಲುಗಳನ್ನು ಉಲ್ಲೇಖಿಸುತ್ತೇನೆ -

"ನಾನು ಪ್ರವಾಸಿ, ಆದರೆ ಒಂದು ಒಳ್ಳೆಯ ತರಹದ ಪ್ರವಾಸಿ ಎಂದುಕೊಂಡಿದ್ದೇನೆ. ನಾನು ಇಲ್ಲಿರುವುದು ಸಿಟಿಯನ್ನು ಗಮನಿಸಲು, ಅದರ ತುಂಡು ತುಣುಕುಗಳನ್ನು ಖರೀದಿಸಲಲ್ಲ."

"ಮತ್ತೆ, ಅದ್ಹೇಗೋ, ಬೈ ಚಾನ್ಸ್, ನಾನು ತಿಳಿದುಕೊಂಡೆ, ಆ ಎಲ್ಲ ಅಡ್ಡಾಡುವುದು, ತೀವ್ರ ಭಾವನೆಗಳು, ನಿರಂತರವಾಗಿ ನೋಡಿದ್ದನ್ನು, ಅನಿಸಿದ್ದನ್ನು ಸೈನ್ಟ್-ಮಯಿಕಲ್ ಬುಕ್ ಸ್ಟೋರಿನಲ್ಲಿ ಕೊಂಡುಕೊಂಡ ನೋಟ್ ಬುಕ್ಕಿನಲ್ಲಿ ಬರೆಯಬೇಕೆಂಬ ಆತುರ - ಸಹಜವಾಗಿ ನಾನು ಮಾಡುತ್ತಿದ್ದುದೆಲ್ಲಾ ಅದೆಷ್ಟೋ ಜನ ಎಷ್ಟರ ಮಟ್ಟಿಗೆ ಮಾಡಿದ್ದರೆಂದರೆ, ಅದಕ್ಕೆಂದೇ ಒಂದು ಶಬ್ದವೇ ಇತ್ತು. ನಾನು ಒಬ್ಬ ಫ್ಲ್ಯಾನೂರ್. ಅಥವಾ, ಫ್ರೆಂಚ್ ಭಾಷೆಯ ಒಳ್ಳೆಯ ವಿದ್ಯಾರ್ಥಿನಿಯಾದ ನಾನು ಪುಲ್ಲಿಂಗವನ್ನು ಸ್ತ್ರೀಲಿಂಗಕ್ಕೆ ಪರಿವರ್ತಿಸಿದೆ - ಒಬ್ಬ ಫ್ಲ್ಯಾನೂಸ್."

ನಾನು ಒಬ್ಬ ಫ್ಲ್ಯಾನೂಸ್.

Published October 23, 2016

No comments: